ಬೆಂಗಳೂರು: "ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ" ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಬೆಳಗಾವಿ ಬಸ್ ಕಂಡಕ್ಟರ್ ಘಟನೆಯ ಬಗ್ಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.
"ಸೋಮವಾರ ನಾನು ಬೆಳಗಾವಿಗೆ ಹೋಗಿ ಬಂದೆ. ಹಲ್ಲೆಗೊಳಗಾಗಿದ್ದ ಕಂಡಕ್ಟರ್ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಘಟನೆ ಕುರಿತು ಬೆಳಗಾವಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ನಮ್ಮ ರಾಜ್ಯದ ಬಸ್ಗಳು ಮಹಾರಾಷ್ಟ್ರಕ್ಕೆ ಹೋಗ್ತಿಲ್ಲ. 509 ನಮ್ಮ ಬಸ್ಗಳು ನಿತ್ಯ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದವು. ಮಹಾರಾಷ್ಟ್ರದ 130 ಬಸ್ಗಳು ರಾಜ್ಯಕ್ಕೆ ಆಗಮಿಸುತ್ತಿದ್ದವು. ಬಸ್ ಪ್ರಯಾಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ" ಎಂದರು.
"ನಮ್ಮ ರಾಜ್ಯದ ಒಂದು ಬಸ್ಗೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರ ಬಸ್ಗೆ ನಮ್ಮವರು ಯಾವುದೇ ಬಣ್ಣ ಬಳಿದಿಲ್ಲ. ಅವರು ಕೇಸರಿ ಬಣ್ಣ ಬಳಿಯುವುದು. ಕಪ್ಪು ಮಸಿ ಬಳಿಯುವುದು ಮಾಡ್ತಿದ್ದಾರೆ. ಎಲ್ಲ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಕೂಡಲೇ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮೂಲಕ ಮಹಾರಾಷ್ಟ್ರದ ಡಿಜಿ ಅವರೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಸೂಚನೆ ನೀಡಿದ್ದಾರೆ" ಎಂದು ತಿಳಿಸಿದರು.
"ಮಹಾರಾಷ್ಟ್ರದವರಿಗೆ ಅನ್ಯಾಯ ಆಗಿದ್ರೆ ಅವರು ಪ್ರತಿಭಟನೆ ಮಾಡಲಿ. ಅದು ಬಿಟ್ಟು ಬಸ್ಗಳಿಗೆ ಹಾನಿ ಮಾಡುವುದು ಸರಿಯಲ್ಲ. ಮೊದಲಿನಂತೆ ಎಂಇಎಸ್ಗೆ ಪ್ರಭಾವವಿಲ್ಲ. ಮೊದಲು ಅವರ ಪಕ್ಷದಿಂದ ಶಾಸಕರು ಆಯ್ಕೆ ಆಗಿ ಬರ್ತಾ ಇದ್ರು. ಮಹಾನಗರ ಪಾಲಿಕೆಯಲ್ಲೂ ಅವರ ಆಡಳಿತ ಕುಂದಿದೆ. ಎಂಇಎಸ್ ಪುಂಡರ ಹಾವಳಿ ತಡೆಯುವಂತೆ ಗೃಹ ಸಚಿವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯ ರಾಜಕಾರಣಿಗಳಿಗೆ ಕನ್ನಡದ ಮೇಲೆ ಸ್ವಾಭಿಮಾನ ಬಂದಾಗ ಇಂಥ ಘಟನೆಗಳು ಅಂತ್ಯ: ನಾರಾಯಣ ಗೌಡ
ಇದನ್ನೂ ಓದಿ: ಕಂಡಕ್ಟರ್ ಆರೋಗ್ಯ ವಿಚಾರಿಸಿದ ಕರವೇ ನಾರಾಯಣ ಗೌಡ: ಎಂಇಎಸ್ ವಿರುದ್ಧ ಆಕ್ರೋಶ