ಮೈಸೂರು: ಕೊಡಗು ಜಿಲ್ಲೆಯ ಕರಿಮೆಣಸು ಬೆಳೆಗಾರರ ಸಂಕಷ್ಟ ನಿವಾರಿಸುವಲ್ಲಿ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯಶಸ್ವಿಯಾಗಿದ್ದಾರೆ.
ಕೊಡಗಿನಲ್ಲಿ ಹೆಚ್ಚಾಗಿ ಕರಿಮೆಣಸು ಬೆಳೆಯಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಇದರ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುತ್ತಿತ್ತು. ಇದರಿಂದ ಬೆಳೆಗಾರರಿಗೆ ತೊಂದರೆಯಾಗಿತ್ತು.
ಗೋಣಿಕೊಪ್ಪದ ಬೆಳೆಗಾರರೊಬ್ಬರಿಗೆ ಒಂದು ಕೋಟಿ ರೂಪಾಯಿ ಜಿಎಸ್ಟಿ ಕಟ್ಟುವಂತೆಯೂ ನೋಟಿಸ್ ನೀಡಲಾಗಿತ್ತು. ಆದರೆ, ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ ಮತ್ತು ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗ ಸಂಸದ ಯದುವೀರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿತ್ತು.
ಇದಕ್ಕೆ ಸ್ಪಂದಿಸಿದ್ದ ಸಂಸದರು, ಇತ್ತೀಚೆಗಷ್ಟೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕರಿಮೆಣಸಿನ ಮೇಲೆ ವಿಧಿಸುತ್ತಿರುವ ಜಿಎಸ್ಟಿ ದರ ರದ್ದುಪಡಿಸುವಂತೆ ಮನವಿ ಮಾಡಿದ್ದರು. ಈ ಮನವಿಗೆ ಕೇಂದ್ರ ಸಚಿವರು ಸ್ಪಂದಿಸಿದ್ದು, ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಕರಿಮೆಣಸಿನ ಮೇಲಿನ ಜಿಎಸ್ಟಿ ದರವನ್ನು ರದ್ದುಪಡಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಲಾಗಿದೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಯದುವೀರ್, ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಕೊಡಗು ಕರಿಮೆಣಸು ಬೆಳೆಗಾರರ ಸಂಕಷ್ಟವನ್ನು ನಿವಾರಿಸಿದ್ದಕ್ಕೆ ಧನ್ಯವಾದಗಳು. ಇದರಿಂದ ಕೊಡಗು ಮಾತ್ರವಲ್ಲದೇ ಇತರೆ ಕರಿಮೆಣಸು ಬೆಳೆಗಾರರಿಗೂ ಸಾಕಷ್ಟು ನೆರವಾಗಿದೆ ಎಂದು ತಿಳಿಸಿದ್ದಾರೆ.