ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳ ರಾಜ್ಯ ವಿವಿಧ ಜೈಲುಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಕೈದಿಗಳು 196 ಶಿಶುಗಳಿಗೆ ಜನ್ಮ ಕೊಟ್ಟಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತಡೆಗಟ್ಟುವ ಕ್ರಮವಹಿಸಬೇಕು. ಮಹಿಳಾ ಕೈದಿಗಳು ಇರುವ ಆವರಣಗಳಿಗೆ ಪುರುಷ ಉದ್ಯೋಗಿಗಳು ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಅಮಿಕಸ್ ಕ್ಯೂರಿ ಕೋಲ್ಕತ್ತಾ ಹೈಕೋರ್ಟ್ ಎದುರು ಪ್ರಸ್ತಾಪಿಸಿದ್ದಾರೆ.
ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಕಸ್ಟಡಿಯಲ್ಲಿದ್ದಾಗ ಮಹಿಳಾ ಕೈದಿಗಳು ಗರ್ಭಿಣಿಯಾಗುವ ಆತಂಕಕಾರಿ ವಿಷಯದ ಬಗ್ಗೆ ಅಮಿಕಸ್ ಕ್ಯೂರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ವಿವಿಧ ಕಾರಾಗೃಹಗಳಲ್ಲಿ ಅಂದಾಜು 196 ಶಿಶುಗಳು ಜನಿಸಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳದ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಮನೆಗಳಿಗೆ (ಕಾರಗೃಹ) ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಿದರು. ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರ ಪೀಠದಲ್ಲಿ ಬಹುಶಃ ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌ಸಿ ಲಹೋಟಿ ಅವರು ಪತ್ರ ಬರೆಯುವ ಮೂಲಕ ದೇಶದ ವಿವಿಧ ಸುಧಾರಣಾ ಸೌಲಭ್ಯಗಳಲ್ಲಿ ಕೈದಿಗಳ ಅಮಾನವೀಯ ಸ್ಥಿತಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಗಮನ ಸೆಳೆದಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಕೆಲವು ನಿರ್ದೇಶನಗಳನ್ನು ನೀಡಿತು. ಆ ಆದೇಶವನ್ನು ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಕಳುಹಿಸಲಾಗಿದೆ. ಏಕೆಂದರೆ ವಿಷಯ ರಾಜ್ಯಕ್ಕೆ ಸೇರಿದ್ದು. ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸುವ ಮೂಲಕ ಕಾರಾಗೃಹ ಸುಧಾರಣಾ ಸೌಲಭ್ಯಗಳು ಮತ್ತು ಕೈದಿಗಳಿಗೆ ನೀಡಲಾಗುವ ಇತರ ಸೌಲಭ್ಯಗಳ ಕುರಿತು ಪರಿಶೀಲಿಸಲು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಲಾಯಿತು. ರಾಜ್ಯ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ಕೈಗೆತ್ತಿಕೊಂಡು ಒಬ್ಬರನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದ್ದರು.
ಅಮಿಕಸ್ ಕ್ಯೂರಿ ಸಿದ್ಧಪಡಿಸಿದ ವರದಿದಲ್ಲೇನಿದೆ?:ಅಮಿಕಸ್ ಕ್ಯೂರಿ ಅವರು, ರಾಜ್ಯದ ವಿವಿಧ ಸುಧಾರಣಾ ಕೇಂದ್ರಗಳಲ್ಲಿ 196 ಮಹಿಳೆಯರು ಕಾಮತೃಷೆಗೆ ಬಲಿಯಾಗಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತಡೆಗಟ್ಟುವ ಕ್ರಮವಹಿಸುವಂತೆ ತಿಳಿಸಿದರು. ಮಹಿಳಾ ಕೈದಿಗಳನ್ನು ಹೊಂದಿರುವ ಆವರಣಗಳಿಗೆ ಪುರುಷ ಉದ್ಯೋಗಿಗಳು ಪ್ರವೇಶಿಸುವುದನ್ನು ನಿಷೇಧಿಸುವಂತೆ ವರದಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ.