ಹುಬ್ಬಳ್ಳಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಇದನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ವಾಗತಿಸುತ್ತದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಬಜೆಟ್ ಪ್ರತಿಯೊಂದು ರಂಗಕ್ಕೂ ಮಹತ್ವದ ಕೊಡುಗೆ ನೀಡಿದ್ದು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಬಜೆಟ್ನಲ್ಲಿ ಕೈಗಾರಿಕೋದ್ಯಮದ ಅಭಿವೃದ್ಧಿ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಿದೆ. ಅಲ್ಲದೇ ದೂರದೃಷ್ಟಿಯನ್ನಿಟ್ಟುಕೊಂಡು ಮಂಡಿಸಲಾಗಿರುವ ಬಜೆಟ್ ಇದಾಗಿದೆ. ಈ ಬಜೆಟ್ ತೃಪ್ತಿ ತಂದಿದ್ದು, ಕೇಂದ್ರ ಸರ್ಕಾರದ ಬಜೆಟ್ ಸ್ವಾಗತಾರ್ಹವಾಗಿದೆ. ಮೂರನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಮಟ್ಟಿಗೆ ನಿರಾಶದಾಯಕ ಬಜೆಟ್: ಕೇಂದ್ರ ಬಜೆಟ್ ದೇಶಕ್ಕೆ ಉತ್ತಮ ಬಜೆಟ್ ಆದರೆ ಕರ್ನಾಟಕ ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ನಿರಾಶದಾಯಕ ಬಜೆಟ್ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಬಳಿಗಾರ ಹೇಳಿದರು.
ಈ ಬಜೆಟ್ನಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ. ಮಹಿಳೆಯರು, ಯುವಕರು ಹಾಗೂ ಕೃಷಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ. ಮುದ್ರಾ ಲೋನ್ ಅನ್ನು 10 ರಿಂದ 20 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಉದ್ಯೋಗ ಸೃಷ್ಟಿಗೆ ಯುವಕರಿಗೆ ಭತ್ಯೆ ಕೊಡುತ್ತಿರುವುದು ಸ್ವಾಗತಾರ್ಹ. ಆದರೆ ಮಹದಾಯಿ ಹಾಗೂ ರೈಲ್ವೆಗೆ ಹೆಚ್ಚಿನ ಒತ್ತು ಕೊಡಬೇಕಿತ್ತು. ಹೀಗಾಗಿ ನಿರಾಶೆಯನ್ನುಂಟು ಮಾಡಿದೆ ಎಂದರು.
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಮಾತನಾಡಿ, ಹಣಕಾಸು ಸಚಿವೆ ಮಹಿಳೆಯರಿಗೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ. ಆದರೆ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬದಲಿಗೆ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ, ಇದು ಖಂಡನೀಯ. ಈ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ಬಗ್ಗೆ ಏನಾದರೂ ಕೊಡುಗೆ ನೀಡಿದ್ದರೇ ನಿಜಕ್ಕೂ ಖುಷಿ ಆಗ್ತಿತ್ತು. ಕರ್ನಾಟಕದ ಯೋಜನಗಳಿಗೆ ಹೆಚ್ಚಿನ ಒತ್ತು ಕೊಡಿಸುವ ಕೆಲಸವನ್ನು ರಾಜ್ಯದ ಸಂಸದರು ಮಾಡಬೇಕು ಎಂದು ಹೇಳಿದರು.
ಬಜೆಟ್ ಆಶಾದಾಯಕ ಹಾಗೂ ಅಭಿವೃದ್ದಿಗೆ ಪೂರಕ ಬಜೆಟ್: ಚಾರ್ಟೆಡ್ ಅಕೌಂಟ್ ಚನ್ನವೀರ ಮುಂಗರವಾಡಿ ಮಾತನಾಡಿ, ಈ ಬಜೆಟ್ ಆಶಾದಾಯಕ ಹಾಗೂ ಅಭಿವೃದ್ಧಿಗೆ ಪೂರಕ ಬಜೆಟ್ ಆಗಿದೆ. ಭಾರತ ಅಭಿವೃದ್ಧಿಶೀಲ ದೇಶವಾಗಲಿದೆ ಎಂಬುದಕ್ಕೆ ಈ ಬಜೆಟ್ ದಿಕ್ಸೂಚಿಯಾಗಿದೆ. ಈ ಬಜೆಟ್ ಎಲ್ಲಾ ಕ್ಷೇತ್ರಗಳಲ್ಲಿ ಒಳಗೊಂಡಿದೆ. ಕೃಷಿ, ರೈಲ್ವೆ, ನಿರುದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಇದೊಂದು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಬಜೆಟ್: ಸುರೇಶ್ ಕುಮಾರ್ ಜೈನ್ - Union Budget 2024