ಹಾವೇರಿ : ಜಿಲ್ಲೆಯ ಜಾನಪದ ಸೊಗಡಿನ ಕ್ರೀಡೆಗಳು ಎಂದು ಹೋರಿ ಬೆದರಿಸುವ ಸ್ಪರ್ಧೆ, ಗಾಡಾ ಓಡಿಸುವ ಸ್ಪರ್ಧೆ ಮತ್ತು ಟಗರು ಕಾಳಗ. ಸುಗ್ಗಿ ಮುಗಿಯುತ್ತಿದ್ದಂತೆ ರೈತರು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಈ ರೀತಿಯ ಸ್ಪರ್ಧೆ ಆಯೋಜಿಸುತ್ತವೆ. ಹೊಸವರ್ಷ ಮತ್ತು ಸಂಕ್ರಾಂತಿ ಅಂಗವಾಗಿ ಹಾವೇರಿಯಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ಇದುವರೆಗೂ ಸಾವನ್ನಪ್ಪಿದ ಕೊಬ್ಬರಿ ಹೋರಿಗಳ ಸವಿನೆನಪಿಗಾಗಿ ಗಾಡಾ ಸ್ಫರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಹಾವೇರಿ, ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ 50ಕ್ಕೂ ಅಧಿಕ ಎತ್ತುಗಳು ಪಾಲ್ಗೊಂಡಿದ್ದವು.
ಕಡಿಮೆ ಅವಧಿಯಲ್ಲಿ ಅತ್ಯಧಿಕ ದೂರ ಚಲಿಸಿದ ಹೋರಿಗಳಿಗೆ ಬಹುಮಾನ ನಿಗದಿ ಮಾಡಲಾಗಿತ್ತು. ಪ್ರಥಮ ಬಹುಮಾನವಾಗಿ ಎರಡು ಬೈಕ್ ಮತ್ತು ಬಂಗಾರ, ಹಣವನ್ನ ರೈತರಿಗೆ ನೀಡಲಾಯಿತು.
ಎತ್ತುಗಳು ಶಿಳ್ಳೆ ಹೊಡೆಯುತ್ತಿದ್ದಂತೆ ನಾಗಾಲೋಟದಲ್ಲಿ ಓಡಿದವು. ಎತ್ತುಗಳ ಓಟ ನೋಡುಗರ ಎದೆ ಝಲ್ಲೆನಿಸುವಂತಿತ್ತು. ಧೂಳೆಬ್ಬಿಸಿ ಓಡುತ್ತಿದ್ದ ಎತ್ತುಗಳ ಓಟ ನೋಡುಗರನ್ನ ರೋಮಾಂಚನಕಾರಿಯಾಗಿಸಿತು.
ಈ ಬಗ್ಗೆ ಗಾಡಾ ಸ್ಪರ್ಧೆ ಆಯೋಜಕ ಡಿಳ್ಳೆಪ್ಪ ಡೊಳ್ಳಿನ ಅವರು ಮಾತನಾಡಿ, ''ಜಿಲ್ಲೆಯಲ್ಲಿ ಗಾಡಾ ಸ್ಪರ್ಧೆಯನ್ನ ಹಮ್ಮಿಕೊಂಡಿದ್ದೇವೆ. ಬಸವಣ್ಣನ ಕಸರತ್ತಿನ ಮೇಲೆ ಈ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ. ಇದರಲ್ಲಿ 2100 ಹೆಜ್ಜೆಗಳಿವೆ, ಯಾವ ಎತ್ತುಗಳು ಇದಕ್ಕಿಂತ ಜಾಸ್ತಿ ಓಡುತ್ತವೆಯೋ ಅವುಗಳಿಗೆ ಬಹುಮಾನ ಕೊಡಲಾಗುತ್ತದೆ. ಬಹುಮಾನವಾಗಿ ಎರಡು ಬೈಕ್ ಇಟ್ಟಿದ್ದೇವೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ, ಇದರಿಂದ ರೈತರಿಗೆ ಒಂದು ಹುಮ್ಮಸ್ಸು ಬರುತ್ತದೆ. ಜಿಲ್ಲೆಯಲ್ಲಿ ವೇಗವಾಗಿ ಓಡುವ ಹೋರಿ ಎಂದರೆ ಪ್ರಸಿದ್ಧಿ ಪಡೆಯುತ್ತೆ. ಇಲ್ಲಿರುವ ಒಂದೊಂದು ಹೋರಿಯೂ 5 ರಿಂದ 10 ಲಕ್ಷದವರೆಗೂ ಬೆಲೆ ಬಾಳುತ್ತವೆ'' ಎಂದು ತಿಳಿಸಿದರು.
ಈ ಕುರಿತು ಗಾಡಾ ಸ್ಪರ್ಧೆ ಆಯೋಜಕ ಅನಿಲ ಮಾತನಾಡಿ, ''ರೈತರಿಗಾಗಿ ಪ್ರತಿವರ್ಷವೂ ಗಾಡಾ ಸ್ಫರ್ಧೆ ಆಯೋಜಿಸುತ್ತೇವೆ. ಒಟ್ಟು 21 ಬಹುಮಾನ ಇಟ್ಟಿದ್ದೇವೆ. ಪುರಾತನ ಕಾಲದಿಂದಲೂ ಇದನ್ನ ಆಯೋಜನೆ ಮಾಡುತ್ತಾ ಬಂದಿದ್ದೇವೆ. ಮಹಾರಾಷ್ಟ್ರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಶಿಗ್ಗಾಂವ್, ಹಾವೇರಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಬರುತ್ತಾರೆ. ಸದ್ಯ 60 ಜೋಡಿ ಹೋರಿಗಳು ಭಾಗವಹಿಸುತ್ತಿವೆ'' ಎಂದರು.
ಇದನ್ನೂ ಓದಿ : ಶಿವಮೊಗ್ಗ ಸ್ಪೆಷಲ್: ಅರೆ ಮಲೆನಾಡಿನಲ್ಲಿ ಕ್ರೇಜ್ ಹುಟ್ಟಿಸುವ ಹೋರಿ ಬೆದರಿಸುವ ಹಬ್ಬ; ಹೀಗಿದೆ ಇತಿಹಾಸ! - BULL RUNNING FESTIVAL