ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದ ನಿವೇಶನ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 14 ಬದಲಿ ನಿವೇಶನಗಳ ಹಂಚಿಕೆ ವಿಚಾರ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಇಂದು ಬಿಜೆಪಿಯ ಮಾಜಿ ಶಾಸಕರಾದ ಎಸ್. ಎ ರಾಮದಾಸ್ ಹಾಗೂ ಎಲ್. ನಾಗೇಂದ್ರ ಅವರನ್ನ ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ರಾಮದಾಸ್ 5 ಗಂಟೆಯವರೆಗೆ ವಿಚಾರಣೆ ಎದುರಿಸಿದರು. ಅವರಿಂದ ಪೊಲೀಸರು ಕೆಲವು ಮಾಹಿತಿಯನ್ನ ಪಡೆದುಕೊಂಡರು.
ಲೋಕಾಯುಕ್ತ ವಿಚಾರಣೆ ಮುಗಿಸಿ ಅವರು ವಾಪಸ್ ತೆರಳುವಾಗ ಮಾಧ್ಯಮದವರು ಅವರನ್ನ ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಈ ವೇಳೆ ಅವರು ಮುಡಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ರಾಮದಾಸ್ ಅವರಿಂದ ಮಾಹಿತಿ ಸಂಗ್ರಹಿಸಿದ ನಂತರ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಎಲ್. ನಾಗೇಂದ್ರ ಅವರು ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ಅವರಿಂದಲೂ ಪೊಲೀಸರು ಹಲವು ಮಾಹಿತಿ ಸಂಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅಂದು ಬದಲಿ ನಿವೇಶನ ನೀಡಿದ್ದಾಗ ಮುಡಾ ಕಮಿಟಿಯ ಸದಸ್ಯರಾಗಿದ್ದ ಅಂದಿನ ಸದಸ್ಯರನ್ನ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆ ಹಿನ್ನೆಲೆ ಈ ಇಬ್ಬರು ಬಿಜೆಪಿ ಮಾಜಿ ಶಾಸಕರು ವಿಚಾರಣೆಗೆ ಹಾಜರಾಗಿದ್ದರು ಎಂದು ಲೋಕಾಯುಕ್ತ ಮೂಲಗಳು ಖಚಿತ ಪಡಿಸಿವೆ.
ಇದನ್ನೂ ಓದಿ : ರಕ್ಷಣೆ ಕೋರಿ ಪ್ರಧಾನಿ, ಗೃಹ ಸಚಿವರಿಗೆ ಪತ್ರ ಬರೆದ ಮುಡಾ ದೂರುದಾರ ಸ್ನೇಹಮಯಿ ಕೃಷ್ಣ - SNEHAMAYI KRISHNA