ಅಮರಾವತಿ (ಆಂಧ್ರ ಪ್ರದೇಶ): ಪ್ರವಾಸಿಗರಿಗಾಗಿ ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APTDC) ತಿರುಪತಿಯಿಂದ ನಾಲ್ಕು ಹೊಸ ಬಸ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
ತಿರುಪತಿಯಿಂದ ಕಾಣಿಪಾಕಂ, ಕೊಯಮತ್ತೂರು, ಮೈಸೂರು, ರಾಮೇಶ್ವರಂ, ಮಧುರೈ, ಊಟಿ, ಕನ್ಯಾಕುಮಾರಿ, ಅರುಣಾಚಲಂ ಮತ್ತು ಗೋಲ್ಡನ್ ಟೆಂಪಲ್‌ನಂತಹ ಪ್ರಸಿದ್ಧ ಸ್ಥಳಗಳು ಮತ್ತು ದೇವಾಲಯಗಳಿಗೆ ಈ ಪ್ಯಾಕೇಜ್ ಮೂಲಕ ಭೇಟಿ ನೀಡಬಹುದು.
ಈ ಹಿಂದೆ, ತಿರುಮಲ ಶ್ರೀವಾರಿಯ ದರ್ಶನವನ್ನು ಬಸ್ ಪ್ಯಾಕೇಜ್‌ಗಳ ಮೂಲಕ ಮಾಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ಟಿಕೆಟ್‌ಗಳ ರದ್ದತಿಯಿಂದ ಪ್ರವಾಸೋದ್ಯಮ ಇಲಾಖೆ ಆರ್ಥಿಕ ನಷ್ಟ ಅನುಭವಿಸುತ್ತಿತ್ತು. ಇದನ್ನು ಸರಿದೂಗಿಸಲು ಇದೇ ಬಸ್‌ಗಳನ್ನು ಇತರ ಮಾರ್ಗಗಳಲ್ಲಿ ಬಳಸಲು ಮುಂದಾಗಿದೆ.
ತಿರುಪತಿಯಿಂದ ಕೊಯಮತ್ತೂರು, ಊಟಿ ಮೂಲಕ ಚೆನ್ನೈ: ಭಕ್ತರು ಮತ್ತು ಪ್ರವಾಸಿಗರ ದಟ್ಟಣೆ ಗಮನದಲ್ಲಿಟ್ಟುಕೊಂಡು ನಾಲ್ಕು ಹೊಸ ವಿಶೇಷ ಬಸ್ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ತಿರುಪತಿಯಿಂದ ಕೊಯಮತ್ತೂರು, ಊಟಿ ಮೂಲಕ ಚೆನ್ನೈ ತೆರಳುವ ಪ್ಯಾಕೇಜ್ ಕೂಡ ಒಂದು. ಪ್ರತಿ ಬುಧವಾರ ತಿರುಪತಿಯಿಂದ ಕೊಯಮತ್ತೂರು ಹಾಗೂ ಊಟಿ ಮೂಲಕ ಚೆನ್ನೈಗೆ ಬಸ್ ಸಂಚರಿಸಲಿದ್ದು, 5 ಹಗಲು, 4 ರಾತ್ರಿ ಸೇರಿ ಐದು ದಿನಗಳ ಪ್ರವಾಸ ಇದಾಗಿದೆ. ವಯಸ್ಕರು 4,210 ರೂಪಾಯಿ ಮತ್ತು ಮಕ್ಕಳು 3370 ರೂಪಾಯಿ ಟಿಕೆಟ್ ದರ ಭರಿಸಿದರೆ ಸಾಕು ಐದು ದಿನಗಳ ಪ್ರವಾಸ ಮಾಡಬಹುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ತಿರುಪತಿಯಿಂದ ಮೈಸೂರು, ಊಟಿ ಮೂಲಕ ಬೆಂಗಳೂರು: ಮತ್ತೊಂದು ಪ್ಯಾಕೇಜ್‌ನ ಭಾಗವಾಗಿ, ಪ್ರತಿ ಬುಧವಾರ ತಿರುಪತಿಯಿಂದ ಮೈಸೂರು, ಊಟಿ ಮೂಲಕ ಬೆಂಗಳೂರಿಗೆ ಬಸ್ ಸಂಚರಿಸಲಿದ್ದು, ಇದೂ ಕೂಡ ಐದು ದಿನದ ಪ್ರವಾಸವಾಗಿದೆ. ಇದರ ಟಿಕೆಟ್ ಬೆಲೆ ವಯಸ್ಕರಿಗೆ 3020 ರೂಪಾಯಿ ಮತ್ತು ಮಕ್ಕಳಿಗೆ 2420 ರೂಪಾಯಿ ಇದೆ.
ತಿರುಪತಿ-ರಾಮೇಶ್ವರಂ-ಕನ್ಯಾಕುಮಾರಿ-ಮಧುರೈ-ಶ್ರೀರಂಗಂ-ತಿರುಪತಿ ಮೂಲಕ ಚೆನ್ನೈ: ಪ್ರತಿ ಗುರುವಾರ ತಿರುಪತಿಯಿಂದ-ರಾಮೇಶ್ವರಂ-ಕನ್ಯಾಕುಮಾರಿ-ಮಧುರೈ-ಶ್ರೀರಂಗಂ-ತಿರುಪತಿ ಮೂಲಕ ಚೆನ್ನೈಗೆ ಪ್ರವಾಸ ಮಾಡಬಹುದಾದ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಿದೆ. 4 ಹಗಲು ಮತ್ತು 3 ರಾತ್ರಿ ಸೇರಿದಂತೆ ನಾಲ್ಕು ದಿನಗಳ ಪ್ರವಾಸ ಇದಾಗಿದ್ದು, ಇದರ ಟಿಕೆಟ್ ಬೆಲೆಯನ್ನು ವಯಸ್ಕರಿಗೆ 5,600 ರೂಪಾಯಿ ಮತ್ತು ಮಕ್ಕಳಿಗೆ 4,480 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ನಾಲ್ಕನೇ ಪ್ಯಾಕೇಜ್: ನಾಲ್ಕನೇ ಪ್ಯಾಕೇಜ್ ತಿರುಪತಿಯಿಂದ ಆರಂಭವಾಗಿ ಕಾಣಿಪಾಕಂ, ಅರುಣಾಚಲಂ ಮತ್ತು ಸುವರ್ಣ ದೇವಾಲಯಕ್ಕೆ ಭೇಟಿ ನೀಡಿದ ನಂತರ ತಿರುಪತಿಗೆ ಹಿಂತಿರುಗಬಹುದು. ಒಂದು ದಿನದ ಪ್ಯಾಕೇಜ್ ಇದಾಗಿರಲಿದೆ. ಇದು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 9 ಗಂಟೆಗೆ ಕೊನೆಗೊಳ್ಳುತ್ತದೆ. ವಯಸ್ಕರಿಗೆ ಟಿಕೆಟ್ ಬೆಲೆ ಕೇವಲ 1,200 ರೂಪಾಯಿ ಇದ್ದರೆ, ಚಿಕ್ಕ ಮಕ್ಕಳಿಗೆ 960 ರೂಪಾಯಿ ನಿಗದಿಪಡಿಸಲಾಗಿದೆ.
ಆಹಾರ ಮತ್ತು ವಸತಿ: ಈ ಪ್ಯಾಕೇಜ್‌ಗಳಲ್ಲಿ ಉಪಹಾರ, ಮಧ್ಯಾಹ್ನ ಊಟ ಮತ್ತು ವಸತಿ ಕೂಡ ಸೇರಿವೆ. ಇದಲ್ಲದೆ, ಮಲ್ಟಿ-ಆಕ್ಸಲ್ ಎಸಿ ವೋಲ್ವೋ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್‌ನಲ್ಲಿ 40 ಸೀಟುಗಳಿರಲಿವೆ. ಹೆಚ್ಚಿನ ವಿವರಗಳು ಮತ್ತು ಬುಕಿಂಗ್‌ಗಳಿಗಾಗಿ, ನೀವು APTDC ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಟಿಕೆಟ್ ದರಗಳು ಮತ್ತು ಇತರ ವಿವರಗಳಿಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು 9848007024, 9848850099, ಮತ್ತು 9848973985 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಕಟಣೆ ಮೂಲಕ ತಿಳಿಸಿದೆ.
ಪ್ಯಾಕೇಜ್‌ಗಳು:
- ತಿರುಪತಿ – ಕೊಯಮತ್ತೂರು (ಪ್ರತಿ ಬುಧವಾರ) | 4-ದಿನಗಳ ಪ್ರವಾಸ
- ತಿರುಪತಿ – ಮೈಸೂರು (ಪ್ರತಿ ಬುಧವಾರ) | 4-ದಿನಗಳ ಪ್ರವಾಸ
- ತಿರುಪತಿ – ಮಧುರೈ ವಯಾ ಕನ್ಯಾಕುಮಾರಿ (ಪ್ರತಿ ಗುರುವಾರ) | 4-ದಿನಗಳ ಪ್ರವಾಸ
- ತಿರುಪತಿ - ಕಾಣಿಪಾಕಂ, ಗೋಲ್ಡನ್ ಟೆಂಪಲ್, ಅರುಣಾಚಲಂ (ದೈನಂದಿನ)
ಇದನ್ನೂ ಓದಿ: ₹20 ಸಾವಿರದಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ: MSIL ಟೂರ್ ಪ್ಯಾಕೇಜ್ - MSIL TOUR PACKAGE