ಅಹ್ಮದಾಬಾದ್(ಗುಜರಾತ್): ಪಾಟೀದಾರ್ ಆಂದೋಲನದ ನಾಯಕರಾದ ಹಾರ್ದಿಕ್ ಪಟೇಲ್, ದಿಲೀಪ್ ಸಬ್ವಾ, ಅಲ್ಪೇಶ್ ಕಥಿರಿಯಾ ಮತ್ತು ಲಾಲ್ಜಿ ಪಟೇಲ್ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಮತ್ತು ಇತರ ಗಂಭೀರ ಪ್ರಕರಣಗಳನ್ನು ಗುಜರಾತ್ ಸರ್ಕಾರ ಹಿಂಪಡೆದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸರ್ಕಾರ ಘೋಷಿಸಿದ ಈ ನಿರ್ಧಾರವನ್ನು ಪಾಟೀದಾರ್ ನಾಯಕರು ಮತ್ತು ಸಮುದಾಯದ ಸದಸ್ಯರು ಸ್ವಾಗತಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ವಿರಾಮ್ ಗಮ್ ಶಾಸಕ ಮತ್ತು ಪ್ರಮುಖ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಪಾಟೀದಾರ್ ಆಂದೋಲನದ ಸಮಯದಲ್ಲಿ ನನ್ನ ಮತ್ತು ಸಮುದಾಯದ ಅನೇಕ ಯುವಕರ ವಿರುದ್ಧ ದೇಶದ್ರೋಹ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಇಂದು ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರವು ಈ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ. ಸಮುದಾಯದ ಪರವಾಗಿ, ನಾನು ಗುಜರಾತ್ನ ಬಿಜೆಪಿ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ." ಎಂದು ಅವರು ಬರೆದಿದ್ದಾರೆ.
ಗುಜರಾತ್ನಲ್ಲಿ 2015ರಲ್ಲಿ ಪ್ರಾರಂಭವಾದ ಪಾಟೀದಾರ್ ಆಂದೋಲನವು ಪಾಟೀದಾರ್ (ಪಟೇಲ್) ಸಮುದಾಯದ ನೇತೃತ್ವದಲ್ಲಿ ನಡೆದ ಪ್ರಮುಖ ಸಾಮಾಜಿಕ-ರಾಜಕೀಯ ಆಂದೋಲನವಾಗಿದ್ದು, ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗಿತ್ತು.
ಹಾರ್ದಿಕ್ ಪಟೇಲ್ ಮತ್ತು ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ನೇತೃತ್ವದಲ್ಲಿ ನಡೆದ ಈ ಆಂದೋಲನವು ಶಾಂತಿಯುತವಾಗಿಯೇ ಪ್ರಾರಂಭವಾಗಿತ್ತು. ಆದರೆ ಆಗಸ್ಟ್ 25, 2015 ರಂದು ಅಹಮದಾಬಾದ್ನಲ್ಲಿ ನಡೆದ ಬೃಹತ್ ರ್ಯಾಲಿಯೊಂದಿಗೆ ಇದರ ತೀವ್ರತೆ ಹೆಚ್ಚಾಯಿತು.
ಅದರಲ್ಲೂ ಪೊಲೀಸರು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ನಂತರ ಹಿಂಸಾತ್ಮಕ ಘರ್ಷಣೆಗಳು, ಅಗ್ನಿಸ್ಪರ್ಶದ ಘಟನೆಗಳು ನಡೆದಿದ್ದವು. ಪರಿಸ್ಥಿತಿ ನಿಭಾಯಿಸಲು ಆಗ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು ಹಾಗೂ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ 45 ಪಾಟೀದಾರ್ ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗುಜರಾತ್ ಸರ್ಕಾರವು ಹಾರ್ದಿಕ್ ಪಟೇಲ್ ಸೇರಿದಂತೆ ಹಲವಾರು ನಾಯಕರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಿತ್ತು.
ಅನೇಕ ಕಾನೂನು ಹೋರಾಟಗಳು ಮತ್ತು ಗುಜರಾತ್ ಹೈಕೋರ್ಟ್ ಒಬಿಸಿ ಬೇಡಿಕೆಯನ್ನು ತಿರಸ್ಕರಿಸಿದ ನಂತರ ಈ ಆಂದೋಲನವು ಗುಜರಾತ್ನ 2017ರ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಿತು. ಅನೇಕ ಪಾಟೀದಾರ್ಗಳು ಬಿಜೆಪಿ ಬಿಟ್ಟು ಪ್ರತಿಪಕ್ಷ ಕಾಂಗ್ರೆಸ್ಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದರು. ನಂತರದ ವರ್ಷಗಳಲ್ಲಿ ಹಾರ್ದಿಕ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ಪಾಟೀದಾರ್ ನಾಯಕರು ರಾಜಕೀಯಕ್ಕೆ ಬಂದರು. ಸ್ವತಃ ಹಾರ್ದಿಕ್ 2022ರಲ್ಲಿ ಬಿಜೆಪಿಗೆ ಸೇರಿದರು.
ಇದನ್ನೂ ಓದಿ: ಮೊದಲ ಮದುವೆ ಕಾನೂನುಬದ್ಧವಾಗಿ ಮುರಿದುಕೊಳ್ಳದಿದ್ದರೂ ಮಹಿಳೆಗೆ ಎರಡನೇ ಪತಿ ಜೀವನಾಂಶ ಪಾವತಿಸಬೇಕು: ಸುಪ್ರೀಂ - SUPREME COURT