ಟೆಹ್ರಾನ್(ಇರಾನ್): ತಮ್ಮ ದೇಶ ಎಂದಿಗೂ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಗುರುವಾರ ಹೇಳಿದ್ದಾರೆ.
ಇರಾನ್ನ 1979ರ ಇಸ್ಲಾಮಿಕ್ ಕ್ರಾಂತಿಯ ವಿಜಯದ 46ನೇ ವಾರ್ಷಿಕೋತ್ಸವದ ಅಂಗವಾಗಿ ಟೆಹ್ರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ಇರಾನ್ ರಾಜಧಾನಿಯಲ್ಲಿ ನಡೆದ ಈ ಸಮಾರಂಭದಲ್ಲಿ ವಿದೇಶಿ ರಾಯಭಾರಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
"ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುವುದಿಲ್ಲ. ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಫತ್ವಾ ಹೊರಡಿಸುವ ಮೂಲಕ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ಪೆಜೆಶ್ಕಿಯಾನ್ ಹೇಳಿದರು.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಪರಿಶೀಲಿಸುವುದು ತುಂಬಾ ಸುಲಭ. "ಪರಮಾಣು ಪರೀಕ್ಷಕರು ಅವರು ಬಯಸಿದಾಗಲೆಲ್ಲ ಇಲ್ಲಿಗೆ ಬಂದು ಬಯಸಿದಾಗಲೆಲ್ಲಾ ತನಿಖೆ ಮಾಡಿದ್ದಾರೆ. ಇನ್ನೂ ನೂರು ಬಾರಿ ಬೇಕಾದರೆ ಅವರು ಬಂದು ತನಿಖೆ ಮಾಡಲಿ. ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ನಾವು ಎಂದಿಗೂ ಕೈ ಹಾಕಲ್ಲ." ಎಂದು ಅವರು ತಿಳಿಸಿದರು.
ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುವುದನ್ನು ತಡೆಯುವ ಉದ್ದೇಶದಿಂದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ವಿರುದ್ಧ ಗರಿಷ್ಠ ಒತ್ತಡದ ಅಭಿಯಾನವನ್ನು ಪುನಃಸ್ಥಾಪಿಸಲು ಕಾರ್ಯನಿರ್ವಾಹಕ ಆದೇಶ ಹೊರಡಿಸಿದ ನಂತರ ಇರಾನ್ ಅಧ್ಯಕ್ಷರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
ಟ್ರಂಪ್ ಅವರ ಆದೇಶದ ಬಗ್ಗೆ ಬುಧವಾರ ರಾತ್ರಿ ಇರಾನ್ನ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಾಗ್ಚಿ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಗರಿಷ್ಠ ಒತ್ತಡ ಎಂದು ಕರೆಯಲ್ಪಡುವ ಅಭಿಯಾನವು ವಿಫಲ ಪ್ರಯತ್ನವಾಗಿದೆ" ಎಂದು ಬರೆದಿದ್ದಾರೆ. ಈ ಪದವನ್ನು ಪುನರಾವರ್ತಿಸುವುದು ಇರಾನ್ನಿಂದ ಗರಿಷ್ಠ ಮಟ್ಟದ ಪ್ರತಿರೋಧವನ್ನು ಹುಟ್ಟು ಹಾಕುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಜುಲೈ 2015ರಲ್ಲಿ ವಿಶ್ವ ಶಕ್ತಿಗಳೊಂದಿಗೆ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಎಂದು ಔಪಚಾರಿಕವಾಗಿ ಕರೆಯಲ್ಪಡುವ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತು. ನಿರ್ಬಂಧಗಳನ್ನು ತೆಗೆದುಹಾಕುವುದಕ್ಕೆ ಪ್ರತಿಯಾಗಿ ತನ್ನ ಪರಮಾಣು ಕಾರ್ಯಕ್ರಮದ ಮೇಲೆ ಹೇರಲಾದ ನಿರ್ಬಂಧಗಳನ್ನು ಒಪ್ಪಿಕೊಂಡಿತು. ಆದಾಗ್ಯೂ, ಯುನೈಟೆಡ್ ಸ್ಟೇಟ್ಸ್ ಮೇ 2018ರಲ್ಲಿ ಒಪ್ಪಂದದಿಂದ ಹಿಂದೆ ಸರಿದು ನಿರ್ಬಂಧಗಳನ್ನು ಪುನಃಸ್ಥಾಪಿಸಿತ್ತು.
ಇದನ್ನೂ ಓದಿ: ಇರಾನ್ ಮೇಲೆ ಆರ್ಥಿಕ ಒತ್ತಡ, ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಕ್ಕೆ ಟ್ರಂಪ್ ಆದೇಶ