ಧಾರವಾಡ: ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬಹಳ ದಿನದಿಂದಲೂ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು ಕೇಳಿಬಂದಿತ್ತು. ಇಂದು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಪ್ರತ್ಯೇಕ ಪಾಲಿಕೆ ಘೋಷಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಧಾರವಾಡ ಕಚೇರಿ ಎದುರು ಸಂಭ್ರಮಾಚರಣೆ ಮಾಡಲಾಗಿದೆ. ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸದಸ್ಯರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಕಾಲ ಸನ್ನಿಹಿತ: ಸವಾಲುಗಳೇನು? ಪ್ರತ್ಯೇಕ ಪಾಲಿಕೆಯಾದ್ರೆ ಅನುಕೂಲವೇನು?
ಅಭಿವೃದ್ಧಿ ವಿಷಯವಾಗಿ ಧಾರವಾಡಕ್ಕೆ ಹೆಚ್ಚಿನ ಅನುದಾನ ಬರುತ್ತಿಲ್ಲ ಪ್ರತ್ಯೇಕ ಪಾಲಿಕೆಯಾಗಬೇಕು ಎಂದು ಹೋರಾಟ ಮಾಡಲಾಗಿತ್ತು. ಕಳೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರಾದ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ ಅವರು ಪ್ರಸ್ತಾಪಿಸಿ ಪ್ರತ್ಯೇಕ ಪಾಲಿಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಅದರಂತೆ ರಾಜ್ಯ ಸರ್ಕಾರ ವಿಸೃತವಾದ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿತ್ತು. ಅಂತಿಮವಾಗಿ ವರದಿ ನೀಡಿದ ಬಳಿಕ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ರಾಜ್ಯ ಸಾರಿಗೆ ಬಸ್ ಪ್ರಯಾಣ ದರದಲ್ಲಿ ಏರಿಕೆ: ಎಷ್ಟು, ಯಾವಾಗಿನಿಂದ ಎಂಬುದನ್ನು ತಿಳಿಯಿರಿ