ಧಾರವಾಡ: ಅವಳಿ ನಗರ ಹುಬ್ಬಳ್ಳಿ-ಧಾರವಾಡ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದು ಗುಡ್ ನ್ಯೂಸ್. ಇನ್ಮುಂದೆ ಈ ರಸ್ತೆಯಲ್ಲಿ ಸಂಚರಿಸುವ ಯಾವುದೇ ವಾಹನಕ್ಕೆ ಟೋಲ್ ಇರುವುದಿಲ್ಲ.
'ಕಿಲ್ಲರ್ ಬೈಪಾಸ್' ಎಂದೇ ಕುಖ್ಯಾತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ನಾಳೆಯಿಂದ ವಾಹನ ಸವಾರರು ಟೋಲ್ ಕಟ್ಟದೇ ಸಂಚರಿಸಬಹುದು. ಹುಬ್ಬಳ್ಳಿ-ಧಾರವಾಡ ಮಧ್ಯದ 30 ಕಿ.ಮೀ ರಸ್ತೆಗೆ ಟೋಲ್ ಇತ್ತು. ಗಬ್ಬೂರ ಕ್ರಾಸ್ನಲ್ಲಿ ಒಂದು ಟೋಲ್, ಧಾರವಾಡ ನರೇಂದ್ರ ಕ್ರಾಸ್ ಬಳಿ ಮತ್ತೊಂದು ಟೋಲ್ ಇತ್ತು.
ಕಳೆದ 24 ವರ್ಷಗಳ (2000) ಹಿಂದೆ ಹೆದ್ದಾರಿ ಟೋಲ್ ಆರಂಭವಾಗಿತ್ತು. ಬೈಪಾಸ್ ರಸ್ತೆ ನಿರ್ಮಿಸಿದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್ ಟೋಲ್ ಸಂಗ್ರಹಿಸುತ್ತಿತ್ತು. ಈಗ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಟೋಲ್ ಫ್ರೀಯಾಗುತ್ತಿದೆ.
ಇದಕ್ಕೂ ಮೊದಲು ಎರಡು ಬಾರಿ ಅವಧಿ ಮುಗಿದಿತ್ತು. ಕಂಪನಿ ಕೋರ್ಟ್ನಿಂದ ಅವಧಿ ವಿಸ್ತರಣೆ ಪಡೆದುಕೊಂಡಿತ್ತು. ಆದರೆ, ಈ ಬಾರಿ ಅವಧಿ ವಿಸ್ತರಣೆ ಮಾಡದೇ ಟೋಲ್ ಫ್ರೀ ಮಾಡಲಾಗಿದೆ.
"ನರೇಂದ್ರದಿಂದ ಹುಬ್ಬಳ್ಳಿಯ ಗಬ್ಬರೂವರೆಗಿನ ಈ ಬೈಪಾಸ್ ರಸ್ತೆಯಲ್ಲಿನ ಟೋಲ್ ಸೆ.7ರ ಬೆಳಗ್ಗೆಯಿಂದ ಮುಕ್ತವಾಗಲಿದೆ. ಬೈಪಾಸ್ ರಸ್ತೆ ಇನ್ನು ಮುಂದೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಹಸ್ತಾಂತರವಾಗುತ್ತದೆ. ದ್ವೀಪದ ರಸ್ತೆ ಈಗ 6 ಲೈನ್ ರಸ್ತೆ ಕೂಡ ಆಗುತ್ತಿದೆ. ಕಾಮಗಾರಿ ಮುಗಿದ ಬಳಿಕ NHAI ಮುಂದಿನ ಕ್ರಮ ಕೈಗೊಳ್ಳಲಿದೆ. ರಸ್ತೆಯ ಮೇಂಟೆನೆನ್ಸ್ ಅನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಟೋಲ್ ಆರಂಭಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟಿದ್ದು" ಎಂದು ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಶಿವಾನಂದ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ಸಿಹಿ ಸುದ್ದಿ: ಇನ್ಮುಂದೆ ಹುಬ್ಬಳ್ಳಿ- ಧಾರವಾಡ ಬೈಪಾಸ್ನಲ್ಲಿ ಟೋಲ್ ಫ್ರೀ ಸಂಚಾರ - TOLL FREE