ಉಡುಪಿ: ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗಿದ್ದ ಆರು ಮಂದಿ ನಕ್ಸಲರ ಪೈಕಿ ನಾಲ್ವರನ್ನು ವಶಕ್ಕೆ ಪಡೆದಿರುವ ಕಾರ್ಕಳ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕಾರ್ಕಳ- ಹೆಬ್ರಿಯ 15 ಪ್ರಕರಣಗಳ ಕುರಿತು ತನಿಖೆ ನಡೆಸಲು ಮಾರಪ್ಪ(ಜಯಣ್ಣ), ಮುಂಡಗಾರು ಲತಾ, ವನಜಾಕ್ಷಿ(ಜ್ಯೋತಿ), ಸುಂದರಿ(ಗೀತಾ, ಜೆನ್ನಿ) ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯ ನಾಲ್ವರು ನಕ್ಸಲರನ್ನು 5 ದಿನ ಪೊಲೀಸರ ವಶಕ್ಕೆ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗೃಹದಿಂದ ಇವರನ್ನು ಕಾರ್ಕಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮತ್ತೋರ್ವ ನಕ್ಸಲ್ ಶರಣಾಗತಿ: ಕೋಟೆಹೊಂಡ ರವಿ ಮುಖ್ಯವಾಹಿನಿಗೆ
ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿ ಪ್ರವೇಶಿಸಿದ್ದ ನಕ್ಸಲರು: ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಬಳಿಕ ಸಂವಿಧಾನದ ವಿರುದ್ಧ ಹಾದಿಯಲ್ಲಿ ತೆರೆಮರೆಯಲ್ಲಿ ಹೋರಾಟ ನಡೆಸುತ್ತಿರುವವರು ಮುಖ್ಯವಾಹಿನಿಗೆ ಬಂದರೆ ಸರ್ಕಾರ ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದನ್ನು ನಂಬಿ ಆರು ಮಂದಿ ನಕ್ಸಲರು ಜ.8ರಂದು ಶರಣಾಗಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯನವರ ಎದುರು ಶರಣಾಗಿದ್ದ ನಕ್ಸಲರಿಗೆ ಹೂಗುಚ್ಛ ಹಾಗೂ ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಲಾಗಿತ್ತು.