ಬೆಂಗಳೂರು: ವಯಸ್ಸಿನ ಕುರಿತು ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಮತ್ತವರ ಕುಟುಂಬದ ಸದಸ್ಯರು ಹಾಗೂ ತರಬೇತುದಾರ ಯು. ವಿಮಲ್ ಕುಮಾರ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧದ ಎಫ್ಐಆರ್ ಹಾಗೂ ಅದರ ಕುರಿತ ನಗರದ 8ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಲಕ್ಷ್ಯ ಸೇನ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಫೆಬ್ರವರಿ 19 ರಂದು ಈ ಆದೇಶ ನೀಡಿದೆ. ಅಲ್ಲದೇ, ಪ್ರಕರಣ ಸಂಬಂಧ ದೂರುದಾರರು ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಅಂಶಗಳು ಆರೋಪ ಸಂಬಂಧ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಾಗಿದ್ದು, ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಲಕ್ಷ್ಯ ಸೇನ್ ಅವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ತಮ್ಮ ವಯಸ್ಸನ್ನು 2.5 ವರ್ಷಗಳ ಕಾಲ ಕಡಿಮೆ ತೋರಿಸಲಾಗಿದೆ. ಈ ಕೃತ್ಯಕ್ಕಾಗಿ ಅವರು ವಯಸ್ಸಿನ ಪ್ರಮಾಣ ಪತ್ರವನ್ನು ನಕಲಿ ಮಾಡಿ ತಪ್ಪಾಗಿ ಮಾಹಿತಿಯನ್ನು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ನೀಡಿರುವುದಾಗಿ ಆರೋಪ ಎದುರಾಗಿತ್ತು.
ಈ ಸಂಬಂಧ ಎಂ.ಜಿ.ನಾಗರಾಜ್ ಎಂಬುವರು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಪಡೆದುಕೊಂಡಿದ್ದರು. ಬಳಿಕ ಈ ಸಂಬಂಧ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರು ಪರಿಗಣಿಸಿದ್ದ ನ್ಯಾಯಾಲಯ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಲಕ್ಷ್ಯ ಸೇನ್ ಅವರ ಸಹೋದರ ಚಿರಾಗ್ ಸೇನ್ ಮತ್ತು ತರಬೇತುದಾರ ಯು. ವಿಮಲ್ ಕುಮಾರ್ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ದಾಖಲಾಗಿರುವ ಎಫ್ಐಆರ್ ಆಧಾರ ರಹಿತವಾಗಿದೆ. ಅವರಿಗೆ ಕಿರುಕುಳ ನೀಡುವ ಸಲುವಾಗಿ ಈ ದೂರು ದಾಖಲಿಸಿದ್ದು, ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಕೋರಿದ್ದರು. ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು ವಿಚಾರಣಾ ಹಂತದಲ್ಲಿದೆ.
ಇದನ್ನೂ ಓದಿ: ಕಳಪೆ ಕೀಟನಾಶಕ ಮಾರಾಟಕ್ಕಿಟ್ಟ ಆರೋಪ: ಮಳಿಗೆ ಮಾಲೀಕರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಇದನ್ನೂ ಓದಿ: '30 ವರ್ಷ ಸೇವೆ ಬಳಿಕವೂ ದಿನಗೂಲಿ ನೌಕರರ ಖಾಯಂಗೊಳಿಸದ ಸರ್ಕಾರದ ಕ್ರಮ ಮಾನವನ ಶ್ರಮ ಶೋಷಣೆ'