ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಪದ್ಮರಾಜ್ ಆರ್. ಅವರು ಕುದ್ರೋಳಿ ಕ್ಷೇತ್ರದಲ್ಲಿ ಶ್ರೀಗೋಕರ್ಣನಾಥ ಹಾಗೂ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿದರು. ಈ ವೇಳೆ ತಮ್ಮ ಗುರು ಮಾಜಿ ಕೇಂದ್ರದ ಸಚಿವ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದುಕೊಂಡರು. ಬಳಿಕ ಕುದ್ರೋಳಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಮೆರವಣಿಗೆ ಆರಂಭಗೊಂಡಿತು. ಸಾವಿರಾರು ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದರು.
ಪದ್ಮರಾಜ್ ಆರ್. ಅವರು ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಮಾನಾಥ ರೈ, ಅಶೋಕ್ ರೈ, ಜೆ. ಆರ್ ಲೋಬೊ ಮತ್ತಿತರರೊಂದಿಗೆ ತೆರೆದ ವಾಹನದಲ್ಲಿ ಸಾಗಿದರೆ, ಸುಮಾರು ನಾಲ್ಕು ಕಿ. ಮೀ ದೂರ ಮೆರವಣಿಗೆಯಲ್ಲಿ ಸಾಗಿ ಕಾರ್ಯಕರ್ತರು ಉತ್ಸಾಹ ತೋರಿದರು. ಈ ಮೆರವಣಿಗೆಯಲ್ಲಿ ಕಾಂಗ್ರೆಸ್ ಧ್ವಜದೊಂದಿಗೆ ತುಳುನಾಡಿನ ಬಾವುಟವೂ ರಾರಾಜಿಸಿತು.
ಬಳಿಕ ಅವರು ದ. ಕ ಜಿಲ್ಲಾಧಿಕಾರಿಯೂ ಚುನಾವಣಾ ಅಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಪದ್ಮರಾಜ್, 33 ವರ್ಷಗಳ ಹಿಂದೆ ಕಾಂಗ್ರೆಸ್ ಸಂಸದರಿದ್ದಾಗ ಮಾತ್ರ ಜಿಲ್ಲೆಯ ಅಭಿವೃದ್ಧಿ ಆಗಿದೆ. ಬಿಜೆಪಿ ಸಂಸದರ ಅವಧಿಯಲ್ಲಿ ಅಭಿವೃದ್ಧಿಯೇ ಆಗಿಲ್ಲ. ಈ ಸಂದರ್ಭದಲ್ಲಿ ಮತೀಯ ವೈಷಮ್ಯ ನಡೆದು ಯಾವುದೇ ಹೊಸ ಕಂಪನಿಗಳು ಬರುತ್ತಿಲ್ಲ. ಮತ್ತೆ ಈ ಬಾರಿ ಕಾಂಗ್ರೆಸ್ ಆಯ್ಕೆಯಾಗಿ ಗತವೈಭವ ಮರಳಲಿದೆ ಎಂದರು.
ಇದನ್ನೂ ಓದಿ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ನಾಮಪತ್ರ ಸಲ್ಲಿಕೆ - Prof Rajeev Gowda