ಬೆಂಗಳೂರು: ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮೆಖ್ರೀ ವೃತ್ತದ ಬಳಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ನಡೆಸಿತು. ಕೂಡಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಚೊಂಬು ಕಸಿದುಕೊಂಡ ಪೊಲೀಸರು, ಪ್ಲೇ ಕಾರ್ಡ್ ಕಾಂಗ್ರೆಸ್ ಫ್ಲಾಗ್ ವಶಕ್ಕೆ ಪಡೆದುಕೊಂಡರು.
ಮೇಕ್ರಿ ಸರ್ಕಲ್ಗೆ ಆಗಮಿಸಿದ ರಣದೀಪ್ ಸಿಂಗ್ ಸುರ್ಜೇವಾಲ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬರಗಾಲ ಸೇರಿದಂತೆ ಅನುದಾನವನ್ನ ರಾಜ್ಯ ಸರ್ಕಾರ ಕೇಳ್ತಿದೆ. ಭದ್ರಾ ಡ್ಯಾಮ್ ಬಗ್ಗೆ ಅನುದಾನಕ್ಕೆ ರಾಜ್ಯ ಸರ್ಕಾರ ಕೇಳ್ತಿದೆ. ರಾಜ್ಯಕ್ಕೆ ಮೋದಿ ಅವರು ಚೊಂಬು ಕೊಟ್ಟಿದ್ದಾರೆ. ರಾಜ್ಯದ ರೈತರಿಗೆ ಚೊಂಬು ನೀಡಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರ ಚೊಂಬು ಸರ್ಕಾರವಾಗಿದೆ ಎಂದು ಕಿಡಿ ಕಾರಿದರು.
ಮೋದಿ ಮತ್ತು ಬಿಜೆಪಿಯವರು ಕರುನಾಡಿನ ಜನತೆಗೆ ಚೊಂಬು ಕೊಟ್ಟಿದ್ದಾರೆ. ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು. 15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು. ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಹಾಕಿದ್ದು ಮಾತ್ರ ಚೊಂಬು. ನಾವು ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ 13 ರೂಪಾಯಿ ಮಾತ್ರ ವಾಪಸ್ ನೀಡುವ ಮೂಲಕ ಚೊಂಬು. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 27 ಜನ ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿದ್ದು ಚೊಂಬು. ಇಷ್ಟೆಲ್ಲ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 6.5ಕೋಟಿ ಕನ್ನಡಿಗರ ಸಹ ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಲಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ರಾಜ್ಯ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುತ್ತಿರುವ ಎರಡನೇ ರಾಜ್ಯ. ನಮಗೆ ಬರೋದು 40-50 ಸಾವಿರ ಕೋಟಿ ರೂಪಾಯಿ. ರಾಜ್ಯದಲ್ಲಿ ಬೀಕರ ಬರಗಾಲ ಇದೆ ಪರಿಹಾರ ಕೊಡಿ ಅಂತಾ ಕಾನೂನಾತ್ಮಕವಾಗಿ ಕೇಳಿದ್ದೇವೆ. 26 ಎಂಪಿಗಳು ಗೆದ್ದಿದ್ದಾರೆ. ಕನ್ನಡಿಗರು ವೋಟು ಹಾಕಿದ್ದಾರೆ. 5 ವರ್ಷದಲ್ಲಿ ರಾಜ್ಯಕ್ಕೆ ಏನ್ ಮಾಡಿದ್ದೀರಾ?. ನಾವು ಬಿಕ್ಷೆ ಕೇಳ್ತಿದ್ದೀವಾ?. 11 ಸಾವಿರ ಕೋಟಿ ಕೊಡಬೇಕು ಅಂತಾ ಫೈನಾನ್ಸ್ ಕಮಿಷನ್ ಹೇಳಿದೆ. ಪ್ರಧಾನಿ, ನಿರ್ಮಲಾ ಸೀತಾರಾಮನ್ ಬೇಡ ಅಂತಿದ್ದಾರೆ. ಪ್ರತಿಭಟನೆ ಮೂಲಭೂತ ಹಕ್ಕು, ನಮ್ಮ ಹಕ್ಕನ್ನು ನಾವು ಚಲಾಯಿಸುತ್ತೇವೆ ಎಂದರು.
ಇತ್ತ ಮೈಸೂರು ವೃತ್ತದ ಬಳಿಯೂ ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಿಡಿದು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಓದಿ: ರಾಜಧಾನಿಗೆ ಮೋದಿ ಆಗಮನ: ಭಾರಿ ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸವಾರರಿಗೆ ಬದಲಿ ಮಾರ್ಗ - Modi visit Bengaluru