ಹುಬ್ಬಳ್ಳಿ: ರಾಜ್ಯದಲ್ಲಿ ನಮಗೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಫಲಿತಾಂಶ ಬರುವ ನಿರೀಕ್ಷೆ ಸ್ಪಪ್ಟವಾಗಿ ಕಾಣುತ್ತಿದೆ. ಬಿಜೆಪಿ ಸಿಂಗಲ್ ಡಿಜಿಟ್ ದಾಟುವುದಿಲ್ಲ, ಡಬಲ್ ಡಿಜಿಟ್ ಮುಟ್ಟುವುದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟದ ಚುನಾವಣೆ. ದ್ವೇಷ ಮತ್ತು ಪ್ರೀತಿ ನಡುವಿನ ಚುನಾವಣೆ ನಡೆಯುತ್ತಿದೆ. ದೇಶಕ್ಕೆ ಏನು ಕೊಟ್ಟಿದ್ದೇನೆ ಎಂಬುದರ ಬಗ್ಗೆ ಈ ಚುನಾವಣೆಯಲ್ಲಿ ಚರ್ಚೆ ಆಗಲಿಲ್ಲ. ದೇಶವನ್ನು ವಿಭಜಿಸುವ ಬಗ್ಗೆ ಕ್ಯಾಂಪೇನ್ ಮಾಡಿದ್ರು. ಬಿಜೆಪಿ ಯಾವತ್ತೂ ಮೀಸಲಾತಿ ಪರ ಇಲ್ಲ ಎಂದು ವಾಗ್ದಾಳಿ ನಡೆಸಿದರು.
''ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಿಧಾನ ಮತ್ತು ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಮೀಸಲಾತಿ ಮೇಲೆ ಅವರಿಗೆ ನಂಬಿಕೆ ಇಲ್ಲ. ಅನಿವಾರ್ಯವಾಗಿ ನಮಗೆ ತೊಂದರೆ ಆಗುತ್ತೆ ಅಂತ ಸುಮ್ಮನೆ ಇದ್ದಾರೆ. ನಿಜವಾಗಿಯೂ ಸಂವಿಧಾನ ಧರ್ಮ ಗ್ರಂಥ ಅವರಿಗೆ ತಿಳಿದಿದ್ದರೆ, ಇವತ್ತು ಜಾಹೀರಾತು ನೀಡುವ ಅವಶ್ಯಕತೆ ಇರಲಿಲ್ಲ. ಬಿಜೆಪಿಯವರ ಪರಿಕಲ್ಪನೆಯೇ ಬೇರೆ ಇದೆ. ಆರ್‌ಎಸ್‌ಎಸ್ ಕಚೇರಿಯ ಮೇಲೆ ಬಾವುಟವನ್ನು ಹಾರಿಸದಂತವರು ಬಿಜೆಪಿಯವರು. ಅವರು ಮಾಡೋದು ಒಂದು ಹೇಳುವುದು ಇನ್ನೊಂದು. ನೇಹಾ ಹಿರೇಮಠ ಬಗ್ಗೆ ಮಾತನಾಡಿದವರು ಮಹಿಳಾ ಕುಸ್ತಿಪಟುಗಳು ಹೋರಾಟ ಮಾಡುವಾಗ ಏನು ಮಾಡ್ತಾ ಇದ್ದೀರಿ'' ಎಂದು ಪ್ರಶ್ನಿಸಿದರು.
''ಜೋಶಿಯವರೇ ನಿಮ್ಮ ಸ್ಟ್ಯಾಂಡ್ ಏನು?. ಮಹಿಳೆಯರ ಮೇಲೆ ದೌರ್ಜನ್ಯ ಆದಾಗ ನಿಮ್ಮ ರಾಜಕೀಯ ಲಾಭಕ್ಕಾಗಿ ಯೋಚನೆ ಮಾಡಿದವರು ನೀವು. ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಮೋದಿಯವರು ಏಕೆ ಮಾತನಾಡಲಿಲ್ಲ. ಅವರು ಕ್ರೈಸ್ತ ಸಮುದಾಯ, ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ಆ ಕಡೆಗೆ ಹೋಗಲಿಲ್ಲವೇ?. ವಾಜಪೇಯಿ ಅವರ ಕಾಲದಿಂದಲೂ ಸಂವಿಧಾನ ಬದಲಾವಣೆ ಮಾಡಲು ಹೊರಟವರು ನೀವು. ಜಾತ್ಯತೀತ ಪದದ ಅರ್ಥ ನಿಮಗೆ ಗೊತ್ತಿಲ್ಲ. ದ್ವೇಷ ಸೃಷ್ಟಿಸಿ, ಬೆಂಕಿ ಹಂಚಿ ಚುನಾವಣೆ ಮಾಡಲು ಹೊರಟವರು ನೀವು'' ಎಂದು ಆರೋಪಿಸಿದರು.
ನಿತ್ಯ ಸುಳ್ಳು ಹೇಳುವ ಬಿಜೆಪಿಯನ್ನ ಮನೆಗೆ ಕಳುಹಿಸಿ: ''ಬಿಜೆಪಿ ಜನರ ವಿಶ್ವಾಸ ಗಳಿಸಿದ್ದರೆ ಕಾಶ್ಮೀರದಲ್ಲಿ ಏಕೆ ಅಭ್ಯರ್ಥಿಗಳನ್ನು ನಿಲ್ಲಿಸಲಿಲ್ಲ. ಬಿಜೆಪಿಯ ಸುಳ್ಳಿನ ಬಣ್ಣ ಬಯಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಉತ್ತರ ಕರ್ನಾಟಕ ಭಾಗದ ಅನೇಕ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಅಹಂಕಾರದಲ್ಲಿ ಪ್ರಲ್ಹಾದ್ ಜೋಶಿ ಇದ್ದರು. ಕರ್ನಾಟಕಕ್ಕೆ ಏನು ಮಾಡಿದ್ದೀರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಕಾಂಗ್ರೆಸ್ ಪಕ್ಷಕ್ಕೆ ನೀವು ವೋಟ್ ಹಾಕಬೇಕು. ನಿತ್ಯ ಸುಳ್ಳು ಹೇಳುವ ಬಿಜೆಪಿಯನ್ನು ಮನೆಗೆ ಕಳುಹಿಸಬೇಕು'' ಎಂದು ಕರೆ ನೀಡಿದರು.
''ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರ ಸರಿಯಾಗಿ ನಡೆದುಕೊಂಡಿದೆ. ಕಾನೂನು ಪ್ರಕಾರ ಅವರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ರೇವಣ್ಣ ಅವರನ್ನು ಬಂಧಿಸುವ ಕೆಲಸ ಮಾಡಲಾಗಿದೆ. ಬಿಜೆಪಿ ಅವರಲ್ಲಿ ಮಹಿಳೆಯರ ಮೇಲಿನ ದ್ವಂದ್ವ ನಿಲುವು ಈ ಕೇಸ್ನಲ್ಲಿ ಎದ್ದು ಕಾಣುತ್ತಿದೆ. ಬಿಜೆಪಿಯವರು ಮಾತುಗಳು ಅವರ ನೈತಿಕತೆಯನ್ನು ತೋರಿಸುತ್ತವೆ'' ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಬಂಧನ ಆಗಲೇಬೇಕು: ಪ್ರಹ್ಲಾದ್ ಜೋಶಿ - Pralhad Joshi