ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿವೆ. ನಾಯಿಗಳು ಗುಂಪಾಗಿ ಕಂಡು ಬರುತ್ತಿರುವುದರಿಂದ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ನಗರದ ಪ್ರಮುಖ ಶಾಪಿಂಗ್ ಸೆಂಟರ್ ಆಗಿರುವ ಗಾಂಧಿ ಬಜಾರ್, ಲಾಲ್‌ಬಾಗ್, ಸಂಪಂಗಿರಾಮನಗರ, ಬಸವನಗುಡಿ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಕಂಡು ಬರುತ್ತಿವೆ. ಪರಿಣಾಮ ಸಾರ್ವಜನಿಕರು ಸಂಚರಿಸಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಂಜೆಯ ವೇಳೆಗೆ ಕೆಲವು ನಾಯಿಗಳ ಗುಂಪು ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದು, ಯಾವ ವಾಹನಗಳು ಆಗಮಿಸಿದರೂ ಅಟ್ಟಿಸಿಕೊಂಡು ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಸಂಚರಿಸಲೂ ಆಗದೆ ಜನರು ಹೈರಾಣಾಗಿ ಹೋಗಿದ್ದಾರೆ. ಬೀದಿ ನಾಯಿಗಳ ಈ ಕಾಟ ಮಿತಿಮೀರಿದ್ದು, ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬೀದಿನಾಯಿಗಳು ಹಲವೆಡೆ ಜನರಿಗೆ ಸಮಸ್ಯೆಯಾಗುತ್ತಿದ್ದರೂ ಈ ಕುರಿತು ಪಾಲಿಕೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇವುಗಳ ಕಾಟಕ್ಕೆ ಮಹಿಳೆಯರು, ಮಕ್ಕಳು ಸಂಚರಿಸಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆಯು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಸುಮ್ಮನಾಗುತ್ತಿದೆ. ಆದರೆ, ಬೀದಿನಾಯಿಗಳು ಜನರ ಮೇಲೆ ದಾಳಿ ನಡೆಸುವ ಮೊದಲೇ ಕ್ರಮ ಕೈಗೊಳ್ಳಬೇಕಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡುವಂತೆ ನಗರ ನಿವಾಸಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗುಂಡ್ಲುಪೇಟೆ ಠಾಣೆ ಆವರಣದಲ್ಲಿ ಪೊಲೀಸರು ಸಾಕಿದ್ದ ನಾಯಿಯಿಂದ ಮೂವರಿಗೆ ಕಡಿತ - dog bite