ಬಾರಿ (ಇಟಲಿ): ಮಹತ್ವದ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ (ಸ್ಥಳೀಯ ಕಾಲಮಾನ) ಇಟಲಿಯ ಅಪುಲಿಯಾಗೆ ಆಗಮಿಸಿದರು. ಅಪುಲಿಯಾದಲ್ಲಿರುವ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಇಟಲಿಯಲ್ಲಿನ ಭಾರತದ ರಾಯಭಾರಿ ವಾಣಿ ರಾವ್ ಮತ್ತು ಇತರ ಅಧಿಕಾರಿಗಳು ಬರಮಾಡಿಕೊಂಡರು.
ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಅವರಿಗೆ ಇದು ಮೊದಲ ವಿದೇಶ ಪ್ರವಾಸವಾಗಿದೆ. ಜೂನ್ 14 ರಂದು ನಡೆಯಲಿರುವ 50ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಪ್ರಧಾನಮಂತ್ರಿಯ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇಟಲಿಯ ಅಪುಲಿಯಾಕ್ಕೆ ತೆರಳಿರುವುದಾಗಿ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ.
ಬೋರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ವಿಶ್ವದ ಗಣ್ಯ ನಾಯಕರ ಜೊತೆಗೆ ಜನರ ಜೀವನ ಸುಧಾರಿಸುವ ಹಾಗೂ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ವಿಷಯ ಸೇರಿದಂತೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಪೋಪ್ ಫ್ರಾನ್ಸಿಸ್ ಅವರು ಸಹ ಇರಲಿದ್ದಾರೆ.
ನಮಸ್ತೆ! ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ತಡ ರಾತ್ರಿ ಆಗಮಿಸಿದ್ದಾರೆ. ಇದು ಖುಷಿಯ ವಿಚಾರ. ಅಪುಲಿಯಾದಲ್ಲಿ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದು, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ.
ಪ್ರಧಾನಿ ಟ್ವೀಟ್: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಆಗಮಿಸಲಾಗಿದೆ. ವಿಶ್ವ ನಾಯಕರೊಂದಿಗೆ ದ್ವಿಪಪಕ್ಷೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್ ಮಾಡಿಕೊಂಡಿದ್ದಾರೆ.
ಇಟಲಿಗೆ ಹೊರಡುವುದಕ್ಕೂ ಮೊದಲು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರವಾಸ ಹೋಗುತ್ತಿದ್ದೇನೆ. ಜೂನ್ 14 ರಂದು ಅಪುಲಿಯಾದಲ್ಲಿ ನಡೆಯುವ ಶೃಂಗದಲ್ಲಿ ಭಾಗವಹಿಸುವೆ. ವಿಶ್ವದ ಗಣ್ಯ ನಾಯಕರ ಜೊತೆಗೆ ಹಲವು ಜಾಗತಿಕ ಸವಾಲುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸತತ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ವಿದೇಶಿ ಭೇಟಿಯಾಗಿ ಜಿ7 ಶೃಂಗಸಭೆಗಾಗಿ ಇಟಲಿಗೆ ಹೋಗಿರುವುದು ಸಂತೋಷ ಎಂದು ಸಹ ಅವರು ಹೇಳಿದ್ದಾರೆ.
ಜೂನ್ 13-15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ಬೊರ್ಗೊ ಎಗ್ನಾಜಿಯಾ ರೆಸಾರ್ಟ್‌ನಲ್ಲಿ ಜಿ7 ಶೃಂಗಸಭೆ ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರಡೊ ಸೇರಿದಂತೆ ಇಟಲಿ ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ 11 ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರನ್ನು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದೆ.
ಇದನ್ನೂ ಓದಿ: ಜಿ7 ಶೃಂಗಸಭೆ: ಇಟಲಿಗೆ ಹೊರಟ ಪ್ರಧಾನಿ ನರೇಂದ್ರ ಮೋದಿ - PM Modi Leaves For Italy