ಧಾರವಾಡ: ಕಾರ್ಮಿಕನ ಮೃತದೇಹವನ್ನು ಎಳೆದೊಯ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯ ಸಿಮೆಂಟ್ ಕಂಪನಿಯೊಂದರಲ್ಲಿ ನಡೆದಿದೆ. ಬಿಹಾರದ ಚಂದನಸಿಂಗ್ (35) ಮೃತ ಕಾರ್ಮಿಕ. ಕಾರ್ಮಿಕನನ್ನು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಆರು ಮಂದಿ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಲಬುರಗಿ ಎಸ್ಪಿ ಆಡೂರು ಶ್ರೀನಿವಾಸಲು ತಿಳಿಸಿದ್ದಾರೆ.
"ಕಾರ್ಮಿಕ ಮೃತಪಟ್ಟಿದ್ದು ಕಾರ್ಖಾನೆಯ ಒಳಗಡೆ ಅಲ್ಲವೇ ಅಲ್ಲ. ಕಾರ್ಮಿಕ ಬಹಿರ್ದೆಸೆಗೆಂದು ಬೆಳಿಗ್ಗೆ ಕಾರ್ಖಾನೆಯಾಚೆಗೆ ಹೋಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ" ಎಂದು ಕಂಪನಿ ಸ್ಪಷ್ಟಪಡಿಸಿದೆ.
ಈ ಕುರಿತು ಧಾರವಾಡ ನಗರದಲ್ಲಿ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, "ಕಲಬುರಗಿಯಲ್ಲಿ ಕಾರ್ಮಿಕನ ಮೃತದೇಹವನ್ನು ಎಳೆದೊಯ್ದ ಕೃತ್ಯ ಅಮಾನವೀಯ. ಮನುಷ್ಯನಿಗೆ ಮನುಷ್ಯತ್ವ ಇಲ್ಲ ಎನ್ನುವಂತಹ ಸಮಾಜ ನಿರ್ಮಾಣ ಮಾಡಿಬಿಟ್ಟಿದ್ದೇವೆ ಎಂದು ಬೇಸರವಾಗುತ್ತಿದೆ. ಕಾರ್ಮಿಕರೇ ಮೃತದೇಹವನ್ನು ಎಳೆದೊಯ್ಯುತ್ತಿರುವ ವಿಡಿಯೋವನ್ನು ನೋಡಿದ್ದೇನೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಕೆಲ ಆರೋಪಿಗಳು ಅರೆಸ್ಟ್ ಆಗಿದ್ದಾರೆ" ಎಂದು ತಿಳಿಸಿದರು.
"ಫ್ಯಾಕ್ಟರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮೃತದೇಹಕ್ಕೆ ಕನಿಷ್ಠ ಗೌರವ ಕೊಡಬೇಕೋ, ಅದನ್ನು ಕೊಡಲಿಲ್ಲವೆಂದರೆ ಯಾವ ರೀತಿಯ ಸಮಾಜವನ್ನು ಸೃಷ್ಟಿ ಮಾಡಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹೇಳಿದರು.
ಕಳೆದ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಗ್ಯಾರಂಟಿ ಯೋಜನೆಗಳ ಹಣ ಜಮೆಯಾಗದೆ ಇರುವ ವಿಚಾರದ ಕುರಿತು ಮಾತನಾಡಿ, "ಮುಖ್ಯಮಂತ್ರಿಗಳು ಹಣ ಕೊಡುತ್ತೇವೆ ಅಂತ ಹೇಳಿದ್ದಾರೆ, ಕೊಡುತ್ತಾರೆ. ಈ ವಿಚಾರವಾಗಿ ಬಿಜೆಪಿಯವರು ಪದೇ ಪದೆ ಟೀಕೆ ಮಾಡುತ್ತನೇ ಇರ್ತಾರೆ. ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡುತ್ತಾನೆ ಇರ್ತೀರಿ. ಅದಕ್ಕೆ ನಾವು ನಾವು ಉತ್ತರ ಕೊಡುತ್ತೇವೆ. ಬಿಜೆಪಿಯವರು 10 ಲಕ್ಷ ಕೊಡುತ್ತೇವೆ ಎಂದು ಹೇಳಿ 11 ವರ್ಷ ಆಯ್ತು. ಮಾಧ್ಯಮದವರು ಇದರ ಜೊತೆಗೆ ಬಿಜೆಪಿಯವರಿಗೆ 10 ಲಕ್ಷ ಹಣ ಯಾವಾಗ ಕೊಡುತ್ತೀರಾ ಎಂದೂ ಕೇಳಬೇಕು" ಎಂದರು.
"ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ನನ್ನ ಬಳಿ ಅದಕ್ಕೆ ಉತ್ತರ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಎಲ್ಲರೂ ಅರ್ಹರಿದ್ದಾರೆ. ಬಹಳಷ್ಟು ಜನ ಹಿರಿಯರಿದ್ದಾರೆ. ಮುಖ್ಯಮಂತ್ರಿಗಳು, ಈಗಿರುವ ಕೆಪಿಸಿಸಿ ಅಧ್ಯಕ್ಷರು ಮತ್ತು ಹಿರಿಯರ ಅಭಿಪ್ರಾಯ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಗಂಗಾವತಿ : ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ತೆಲಂಗಾಣದ ವೈದ್ಯೆ