ಚೆನ್ನೈ, ತಮಿಳುನಾಡು: ಎನ್ಇಪಿ ಬಗ್ಗೆ ಆರೋಪ, ಪ್ರತ್ಯಾರೋಪಗಳ ಸರಣಿ ಮುಂದುವರೆದಿದ್ದು, ತಮಿಳುನಾಡು ತ್ರಿಭಾಷಾ ಸೂತ್ರವನ್ನು ಒಪ್ಪುವುದಿಲ್ಲ ಹಾಗೂ ದ್ವಿಭಾಷಾ ನೀತಿಯನ್ನೇ ಅಳವಡಿಸಿಕೊಳ್ಳಲಿದೆ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಉದಯನಿಧಿ ಈ ಮೂಲಕ ತಿರುಗೇಟು ನೀಡಿದ್ದಾರೆ.
"ನಾವು ನಮಗೆ ಬರಬೇಕಾದ ನಮ್ಮ ಪಾಲಿನ 2150 ಕೋಟಿ ರೂ. ನಿಧಿಯನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಆದರೆ ನಾವು ಎನ್ಇಪಿ ಹಾಗೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳಬೇಕೆಂದು ಅವರು ಹೇಳುತ್ತಿದ್ದಾರೆ. ತಮಿಳುನಾಡು ಯಾವತ್ತಿಗೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿಲ್ಲ ಎಂದಾಗ ಇದರಲ್ಲಿ ರಾಜಕೀಯ ಮಾಡುವಂಥ ವಿಚಾರ ಏನಿದೆ" ಎಂದು ಅವರು ಪ್ರಶ್ನಿಸಿದ್ದಾರೆ.
"ತಮಿಳು ನಮ್ಮ ಹಕ್ಕು. ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕಿದೆ" ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮುನ್ನ, ಎನ್ಇಪಿ ಅನುಷ್ಠಾನದ ಬಗ್ಗೆ ಬಗ್ಗೆ ಕೇಂದ್ರ ಸಚಿವ ಪ್ರಧಾನ್ ಸಿಎಂ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಕೀಯ ಲಾಭಕ್ಕಾಗಿ ಪ್ರಗತಿಪರ ಸುಧಾರಣೆಗಳನ್ನು ಅಪಾಯಗಳೆಂದು ಸ್ಟಾಲಿನ್ ಬಿಂಬಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ, "ತಮಿಳುನಾಡು ಸಿಎಂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಸಿಗುವಂಥ ಪ್ರಯೋಜನಗಳ ಬಗ್ಗೆ ಯೋಚಿಸಬೇಕು" ಎಂದು ಪ್ರಧಾನ್ ಹೇಳಿದ್ದಾರೆ.
ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಬರೆದ ಪತ್ರಕ್ಕೆ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಪ್ರಾಯೋಜಿತ ಎರಡು ಉಪಕ್ರಮಗಳಾದ ಸಮಗ್ರ ಶಿಕ್ಷಣ ಅಭಿಯಾನ (ಎಸ್ಎಸ್ಎ) ಮತ್ತು ಪಿಎಂ ಶ್ರೀ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯೊಂದಿಗೆ ಸಂಪರ್ಕಿಸುವುದು ಮೂಲಭೂತವಾಗಿ ಸ್ವೀಕಾರಾರ್ಹವಲ್ಲ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ತಮಿಳುನಾಡು ಸಿಎಂಗೆ ಬರೆದ ಪತ್ರದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್, "ಪ್ರಧಾನಿಗೆ ಬರೆಯಲಾದ ಪತ್ರವು ಮೋದಿ ಸರ್ಕಾರ ಉತ್ತೇಜಿಸಿದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಸಂಪೂರ್ಣವಾಗಿ ನಿರಾಕರಿಸುವಂತಿದೆ. ಹೀಗಾಗಿ ರಾಜ್ಯವು ಎನ್ಇಪಿ 2020 ಅನ್ನು ಕಾಮಾಲೆ ಕಣ್ಣಿನಿಂದ ನೋಡುವುದು ಮತ್ತು ಪ್ರಗತಿಪರ ಶೈಕ್ಷಣಿಕ ಸುಧಾರಣೆಗಳನ್ನು ಅಪಾಯಗಳೆಂದು ಬಿಂಬಿಸುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಯರ್ ಉತ್ಪಾದನೆಗೆ ಪಡಿತರ ಅಕ್ಕಿ ಬಳಕೆ; ರೈಸ್ ಮಿಲ್ಗಳಿಂದ ಪಾನೀಯ ಕಂಪನಿಗಳಿಗೆ ಸರಬರಾಜು! - RATION RICE DIVERTED FOR BEER