Simple Tomato Chutney Recipe: ಟೊಮೆಟೊ ಚಟ್ನಿ ಅತ್ಯಂತ ಜನಪ್ರಿಯ ಚಟ್ನಿಗಳಲ್ಲಿ ಪ್ರಥಮ ಸ್ಥಾನದಲ್ಲಿ ಬರುತ್ತದೆ. ಈ ಟೊಮೆಟೊ ಚಟ್ನಿಯನ್ನು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ನೀವು ಎಂದಾದರೂ ಟೊಮೆಟೊ ಚಟ್ನಿಯನ್ನು ಟ್ರೈ ಮಾಡಿದ್ದೀರಾ? ಹಾಗಾದರೆ ನೀವು ಒಮ್ಮೆ ರುಚಿ ನೋಡಬೇಕು.
ಎಂದೂ ಸೇವಿಸದಂತಹ ವಾವ್ ಎನಿಸುವ ಭಾವ ನಿಮಗೆ ಲಭಿಸುತ್ತದೆ. ಬ್ಯಾಚುಲರ್‌ಗಳು ಕೂಡ ಈ ಚಟ್ನಿಯನ್ನು ಸರಳವಾದ ರೀತಿಯಲ್ಲಿ ರೆಡಿ ಮಾಡಬಹುದು. ಕೆಲವು ಪದಾರ್ಥಗಳೊಂದಿಗೆ ಮಾಡಿದ ಈ ಚಟ್ನಿಯನ್ನು ಅನ್ನ ಹಾಗೂ ಉಪಹಾರಗಳ ಜೊತೆಗೆ ಸಖತ್ ರುಚಿಯಾಗಿರುತ್ತದೆ. ಈ ಭರ್ಜರಿ ರುಚಿಯ ಟೊಮೆಟೊ ಚಟ್ನಿ ಮಾಡುವುದು ಹೇಗೆ? ಸಿದ್ಧಪಡಿಸುವ ವಿಧಾನ ಹೇಗೆ ಎಂಬುದರನ್ನು ತಿಳಿಯೋಣ.
ಟೊಮೆಟೊ ಚಟ್ನಿಗೆ ಅಗತ್ಯವಿರುವ ಪದಾರ್ಥಗಳೇನು?:
- ಅರ್ಧ ಕೆಜಿ - ಟೊಮೆಟೊ
- 12 - ಬೆಳ್ಳುಳ್ಳಿಯ ಎಸಳು
- ನಿಂಬೆ ಗಾತ್ರದಷ್ಟು - ಹುಣಸೆಹಣ್ಣು
- ಅಗತ್ಯಕ್ಕೆ ತಕ್ಕಷ್ಟು - ಖಾರದ ಪುಡಿ
- ಕಾಲು ಟೀಸ್ಪೂನ್ - ಹುರಿದ ಮೆಂತ್ಯ ಪುಡಿ
- ಕಾಲು ಟೀಸ್ಪೂನ್ - ಹುರಿದ ಸಾಸಿವೆ ಪುಡಿ
- ರುಚಿಗೆ ತಕ್ಕಷ್ಟು - ಹರಳು ಉಪ್ಪು
ಒಗ್ಗರಣೆಗಾಗಿ ಬೇಕಾಗುವ ಸಾಮಗ್ರಿಗಳೇನು?:

- ಅರ್ಧ ಕಪ್ - ಎಣ್ಣೆ
- 1 ಟೀಸ್ಪೂನ್ - ಸಾಸಿವೆ
- 1 ಟೀಸ್ಪೂನ್- ಜೀರಿಗೆ
- 1 ಟೀಸ್ಪೂನ್ - ಉದ್ದಿನ ಬೇಳೆ
- 1 ಟೀಸ್ಪೂನ್ - ಕಡಲೆಬೇಳೆ
- 10 - ಬೆಳ್ಳುಳ್ಳಿಯ ಎಸಳುಗಳು
- 6 - ಒಣ ಮೆಣಸಿನಕಾಯಿ
- 3 ಚಿಗುರು - ಕರಿಬೇವಿನ ಎಲೆಗಳು
- ಅರ್ಧ ಟೀಸ್ಪೂನ್ - ಇಂಗು
- ಒಂದು ಟೀಸ್ಪೂನ್ - ಅರಿಶಿನ
ಟೊಮೆಟೊ ಚಟ್ನಿ ತಯಾರಿಸುವ ವಿಧಾನ:
- ಟೊಮೆಟೊಗಳನ್ನು ತೊಳೆದುಕೊಂಡು ಮಧ್ಯಮ ಗಾತ್ರದ ಪೀಸ್ಗಳಾಗಿ ಕಟ್ ಮಾಡಿಕೊಳ್ಳಿ.
- ಇದೀಗ ಮಿಕ್ಸಿರ್ ಜಾರ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಟೊಮೆಟೊ ತುಂಡುಗಳು ಹಾಗೂ ಹುಣಸೆಹಣ್ಣು ಹಾಕಿ. ಜೊತೆಗೆ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು ಹಾಗೂ ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.
- ನಂತರ ಒಲೆಯ ಮೇಲೆ ಪ್ಯಾನ್ ಇಡಿ, ಅದರೊಳಗೆ ಎಣ್ಣೆಯನ್ನು ಸುರಿಯಿರಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಸ್ವಲ್ಪ ಹುರಿದುಕೊಳ್ಳಿ.
- ಸಾಸಿವೆ ಗರಿಗರಿಯಾಗುವವರೆಗೆ ಹುರಿದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳು, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಇಂಗು ಹಾಗೂ ಅರಿಶಿನವನ್ನು ಹಾಕಿ ಚೆನ್ನಾಗಿ ಕಲಸಿ ಒಮ್ಮೆ ಚೆನ್ನಾಗಿ ಹುರಿದುಕೊಳ್ಳಿ.
- ಚೆನ್ನಾಗಿ ಕಲಸಿದ ನಂತರ ಮೊದಲು ರುಬ್ಬಿದ ಮಿಶ್ರಣವನ್ನು ಹಾಕಿ ಒಮ್ಮೆ ಮಿಕ್ಸ್ ಮಾಡಿ. ಇದಾದ ನಂತರ ಸ್ಟೌವ್ನ್ನು ಕಡಿಮೆ ಉರಿಯಲ್ಲಿ ಇಡಿ. ಎಣ್ಣೆ ಬೇರ್ಪಡುವವರೆಗೆ ಬೇಯಿಸಬೇಕಾಗುತ್ತದೆ.
- ಈ ರೀತಿ ಬೇಯಿಸುವಾಗ ಹುರಿದ ಮೆಂತ್ಯ ಪುಡಿ ಹಾಗೂ ಸಾಸಿವೆ ಪುಡಿ ಹಾಕಿ. ಇವುಗಳನ್ನು ಸೇರಿಸುವುದರಿಂದ ಚಟ್ನಿಗೆ ಉತ್ತಮ ಸುವಾಸನೆಯ ಜೊತೆಗೆ ರುಚಿ ಕೂಡ ಹೆಚ್ಚುತ್ತದೆ. ಅಲ್ಲದೆ, ಚಟ್ನಿ ಮಾಡುವಾಗ ಉಪ್ಪನ್ನು ಪರಿಶೀಲಿಸಿ ಮತ್ತು ಸಾಕಾಗದಿದ್ದರೆ ಸೇರಿಸಿಕೊಳ್ಳಿ.
- ಎಣ್ಣೆಯು ಚಟ್ನಿಯಲ್ಲಿ ಮೇಲೆ ಕಾಣಿಸುವವರೆಗೆ ಬೇಯಿಸಿದ ನಂತರ, ಸ್ಟೌವ್ನ್ನು ಆಫ್ ಮಾಡಿ ಹಾಗೂ ಅದನ್ನು ತಣ್ಣಗಾಗಲು ಬಿಡಬೇಕಾಗುತ್ತದೆ.
- ನಂತರ ಯಾವುದೇ ಗಾಳಿಯಾಡದ ಗಾಜಿನ ಡಬ್ಬದಲ್ಲಿ ಸಂಗ್ರಹಿಸಿ ಇಡಿ. ಇದೀಗ ಬಾಯಲ್ಲಿ ನೀರೂರಿಸುವ ಟೊಮೆಟೊ ಚಟ್ನಿ ಸವಿಯಲು ರೆಡಿಯಾಗಿದೆ.
- ಈ ಟೊಮೆಟೊ ಚಟ್ನಿಯನ್ನು ಕನಿಷ್ಠ ಒಂದು ವಾರದವರೆಗೆ ಸಂಗ್ರಹಿಸಬಹುದು. ಅದೇ ಫ್ರಿಡ್ಜ್ನಲ್ಲಿಟ್ಟರೆ ಸುಮಾರು 20 ದಿನಗಳವರೆಗೆ ಫ್ರೆಶ್ ಆಗಿರುತ್ತದೆ.