Ind vs Ban: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗುತ್ತಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡಲು ಬಯಸುತ್ತಿವೆ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ.
ಭಾರತ-ಬಾಂಗಾದೇಶ ತಂಡಗಳು 2017ರಲ್ಲಿ ಒಮ್ಮೆ ಮಾತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿ ಆಗಿದ್ದವು. ಇದರಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲವು ಸಾಧಿಸಿತ್ತು. ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯದೇ ಇದ್ದ ಕಾರಣ ಉಭಯ ತಂಡಗಳಿಗೆ ಈ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
𝙍𝙀𝘼𝘿𝙔 💪
— BCCI (@BCCI) February 19, 2025
Just one day away from #TeamIndia's opening fixture of #ChampionsTrophy 2025 ⏳ pic.twitter.com/Ri3Z93T28y
ಇದೀಗ 8 ವರ್ಷಗಳ ನಂತರ ಇತ್ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರುಬದುರಾಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಪ್ರತಿ ತಂಡಗಳಿಗೆ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುವ ಅವಕಾಶ ಇರುವ ಕಾರಣ ಎಲ್ಲಾ ಪಂದ್ಯಗಳು ಮಾಡು ಇಲ್ಲವೇ ಮಡಿಯಂತಾಗಿವೆ.
ಅದರಲ್ಲೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಚಾಂಪಿಯನ್ ಆಗಲು ಬಯಸಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
ಕನ್ನಡಿಗನಿಗೆ ಮಹತ್ವದ ಹೊಣೆ: ಏತನ್ಮಧ್ಯೆ, ಇಂದಿನ ಪಂದ್ಯಕ್ಕೆ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ಗೆ ಮಹತ್ವದ ಜವಾಬ್ದಾರಿ ನೀಡಲಾಗುತ್ತಿದೆ. ಬಾಂಗ್ಲಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಹುಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಮತ್ತೊಂದು ಜವಾಬ್ದಾರಿಯನ್ನೂ ಅವರ ಹೆಗಲಿಗೆ ನೀಡಲಾಗುತ್ತಿದೆ.
ಇಂದಿನ ಪಂದ್ಯದಲ್ಲಿ ಯಾರು, ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ನಿರ್ಧಾರವಾಗಿದ್ದು, ರಾಹುಲ್ ಅವರಿಗೆ ಫಿನಿಶರ್ ಜವಾಬ್ದಾರಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೆ ರಾಹುಲ್ 5 ಅಥವಾ 6ನೇ ಕ್ರಮಾಂಕದಲ್ಲಿ ಫಿನಶರ್ ರೋಲ್ ಪ್ಲೇ ಮಾಡಲಿದ್ದಾರೆ. 5ನೇ ಕ್ರಮಾಂದಲ್ಲಿ ರಾಹುಲ್ ಅವರ ದಾಖಲೆ ಉತ್ತಮವಾಗಿದ್ದು ಬಹುತೇಕ ಇದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುವ ಸಾಧ್ಯತೆ ಇದೆ.
ಚಾಂಪಿಯನ್ಸ್ ಟ್ರೋಫಿಗೂ ಮೊದಲು ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಬಹುಬೇಗ ನಿರ್ಗಮಿಸಿದ್ದರು. ಆ ಬಳಿಕ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 40 ರನ್ ಚಚ್ಚಿದ್ದರು. ಸದ್ಯ ಅದೇ ಕ್ರಮಾಂಕದಲ್ಲಿ ರಾಹುಲ್ ಅವರನ್ನು ಮುಂದುವರೆಸಲು ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್ (ವಿ.ಕೀ) ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಕರಾಚಿ ಸ್ಟೇಡಿಯಂನಲ್ಲಿ ಹಾರಾಡಿದ ತಿರಂಗ
ಇದನ್ನೂ ಓದಿ: ಪಾಕಿಸ್ತಾನಕ್ಕೆ ಪ್ರಯಾಣಿಸಲಿರುವ ಮೂವರು ಭಾರತೀಯ ಕ್ರಿಕೆಟರ್ಸ್ ! ಕಾರಣವೇನು?