ಬೆಂಗಳೂರು: ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿದ ಪ್ರಕರಣದ 11 ಆರೋಪಿಗಳನ್ನ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ನಯೀಂ ಪಾಶಾ, ಅರಾಫತ್, ಸಾಹಿಲ್ ಹುಸೈನ್, ನಜ್ಮತ್, ಅದ್ನಾನ್ ಪಾಶಾ, ನಿಯಾಮತುಲ್ಲಾ ಸೇರಿದಂತೆ ಒಟ್ಟು 11 ಆರೋಪಿಗಳನ್ನ ಬಂಧಿಸಲಾಗಿದೆ. 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಫೆಬ್ರವರಿ 13ರಂದು ರೀಲ್ಸ್ ಕ್ರೇಜ್‌ಗಾಗಿ ಮಾರಕಾಸ್ತ್ರ ಹಿಡಿದು, ತ್ರಿಬಲ್ ರೈಡ್, ವ್ಹೀಲಿಂಗ್ ಮಾಡುತ್ತಾ ಕೆ.ಜಿ ಹಳ್ಳಿಯಿಂದ, ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್‌ವರೆಗೂ ಆರೋಪಿಗಳು ಹೋಗಿದ್ದರು. ಅದೇ ರೀತಿ ಕೆ.ಜಿ ಹಳ್ಳಿಗೆ ವಾಪಸಾಗಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರ ಮಧ್ಯೆಯೂ ಕಿಡಿಗೇಡಿಗಳ ಕೃತ್ಯವನ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಗಂಭೀರವಾಗಿ ಪರಿಗಣಿಸಿದ್ದರು.
ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ 11 ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿರುವ ವಿಡಿಯೋಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಆಗ್ರಹಿಸಿದ್ದರು.
ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಎಚ್ಚೆತ್ತುಕೊಳ್ಳದ ಯುವಕರು: ವ್ಹೀಲಿಂಗ್ ಮಾಡುವುದು ಜೀವಕ್ಕೆ ಅಪಾಯಕಾರಿ ಎಂದು ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ. ವರ್ಷದಿಂದ ವರ್ಷಕ್ಕೆ ವ್ಹೀಲಿಂಗ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಅಪ್ರಾಪ್ತರ ವ್ಹೀಲಿಂಗ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಅಂಕಿ ಅಂಶದ ಪ್ರಕಾರ ಬೆಂಗಳೂರಲ್ಲಿ 2024ರಲ್ಲಿ 532 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ 2023ರಲ್ಲಿ 219, 2022ರಲ್ಲಿ 283 ಕೇಸ್ಗಳು ದಾಖಲಾಗಿದ್ದವು. ಕಳೆದ ವರ್ಷ ದಾಖಲಾಗಿದ್ದ 532 ಪ್ರಕರಣಗಳಲ್ಲಿ 530 ದ್ವಿಚಕ್ರವಾಹನಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಪ್ರಾಪ್ತರ ಸಂಖ್ಯೆಯಲ್ಲಿ ಐದುಪಟ್ಟು ಹೆಚ್ಚಳ: ಅಪ್ರಾಪ್ತ ಸವಾರರ ವಿರುದ್ಧ 2022ರಲ್ಲಿ 23 ಹಾಗೂ 2023ರಲ್ಲಿ 74 ಪ್ರಕರಣಗಳು ದಾಖಲಾಗಿದ್ದವು. ಆದರೆ 2024ರಲ್ಲಿ ಈ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಎರಡು ವರ್ಷಗಳಿಗೆ ಹೋಲಿಸಿದರೆ ಪ್ರಕರಣ ಸಂಖ್ಯೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ. ಅಪಾಯಕಾರಿ ವ್ಹೀಲಿಂಗ್ ಕಾರ್ಯಾಚರಣೆ ವಿಶೇಷ ಕಾರ್ಯಾಚರಣೆ ನಡೆಸುವ ಪೊಲೀಸರು ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳ ಮೂಲಕ ಸಾರ್ವಜನಿಕರು ಕಳುಹಿಸುವ ಸವಾರರ ವ್ಹೀಲಿಂಗ್ ವಿಡಿಯೋಗಳನ್ನ ಗಂಭೀರವಾಗಿ ಪರಿಗಣಿಸಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಪಾಯಕಾರಿ ವ್ಹೀಲಿಂಗ್ ಪ್ರಕರಣಗಳಲ್ಲಿ ಅಪ್ರಾಪ್ತರ ಭಾಗಿ ಪ್ರಮಾಣ ಐದು ಪಟ್ಟು ಹೆಚ್ಚಳ!
ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ WPL ಪಂದ್ಯಗಳು: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಮೆಟ್ರೋ ಸೇವೆ ವಿಸ್ತರಣೆ