ಲಂಡನ್: ಪ್ರತಿ ವರ್ಷದಂತೆ ಈ ಸಲವೂ ಕೂಡ ಲಂಡನ್‌ನಲ್ಲಿ ವಿಶ್ವಗುರು, ಮಹಾನ್ ಮಾನವತಾವಾದಿ ಬಸವೇಶ್ವರರ 891ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಯುನೈಟೆಡ್ ಕಿಂಗ್‌ಡಮ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಶನಿವಾರ ಕಾರ್ಯಕ್ರಮ ನಡೆಯಿತು.
ಲಂಡನ್‌ನ ಥೇಮ್ಸ್ ನದಿ ದಡದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಬ್ರಿಟಿಷ್ ಮತ್ತು ಭಾರತೀಯ ಸಮುದಾಯದ ಸದಸ್ಯರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ, ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದ್ದಕ್ಕಾಗಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ನವರು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಲ್ಯಾಂಬೆತ್‌ನ ಮಾಜಿ ಮೇಯರ್ ಆಗಿರುವ ಡಾ. ನೀರಜ್ ಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫೌಂಡೇಶನ್ ಇತರ ಪ್ರಮುಖರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಬೆಳಗಾವಿ: ಸಂಭ್ರಮದ ಬಸವ ಜಯಂತಿ ಆಚರಣೆ: ಐದು ಸಾವಿರ ಲೀಟರ್ ಶರಬತ್ ಹಂಚಿಕೆ - Basava Jayanti
ಥೇಮ್ಸ್ ನದಿ ದಡದಲ್ಲಿ ಸ್ಥಾಪಿತವಾಗಿರುವ ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ತದನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವರು ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ. ಆಲ್ಬರ್ಟ್ ಎಂಬಾಂಕ್ಮೆಂಟ್ನಲ್ಲಿ ಸ್ಥಾಪಿಸಲಾದ ಬಸವೇಶ್ವರ ಮೂರ್ತಿಯು ಬ್ರಿಟನ್‌ನಲ್ಲಿ ಭಾರತದ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆಯಾಗಿದೆ. ಇದು ಬ್ರಿಟಿಷ್ ಸಂಸತ್ತಿನ ಎದುರಿನಲ್ಲಿದ್ದು, ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡುವ ಪ್ರವಾಸಿಗರ ಆಕರ್ಷಕ ತಾಣಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ದಾವಣಗೆರೆ ವಿರಕ್ತ ಮಠದಲ್ಲಿ ಬಸವ ಜಯಂತಿ ಆಚರಣೆ: ಬಸವೇಶ್ವರ ಜಯಂತ್ಯುತ್ಸವಕ್ಕಿದೆ ದೊಡ್ಡ ಇತಿಹಾಸ - Basava Jayanti