ಬೆಂಗಳೂರು: ''ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಕೆಂಪೇಗೌಡರು ಕಟ್ಟಿದ ನಾಡನ್ನು ಪೀಸ್ ಪೀಸ್ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ರಾತ್ರಿ ಅವರು ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಭೆಯಲ್ಲಿ ಪಾಲ್ಗೊಂಡರು. ''ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದ ನಾಡನ್ನು ಏಳು ಪೀಸ್ ಮಾಡಲು ಹೊರಟಿದ್ದಾರೆ. ಈ ಸಂಬಂಧ ಬಿಲ್ ಯಾವ ರೀತಿ ಮಂಡಿಸುತ್ತಾರೆ ಎಂಬುದನ್ನು ನೋಡೋಣ'' ಎಂದರು.

''ಇಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಎರಡು ಪಕ್ಷಗಳ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಲ್ಲರೂ ಜೊತೆಗೂಡಿ ಸಭೆ ನಡೆಸಿದ್ದೇವೆ. ವಿಧಾನಸಭಾ ಅಧಿವೇಶನದ ಬಗ್ಗೆ ಚರ್ಚೆಯಾಗಿದೆ. ಬಜೆಟ್ ನಂತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ'' ಎಂದು ಹೇಳಿದರು.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಕೆಪಿಎಸ್ಸಿ ಅಕ್ರಮ, ಮೈಕ್ರೋ ಫೈನಾನ್ಸ್ ಬಗ್ಗೆ, ಬಾಣಂತಿಯರ ಸಾವು, ರೈತರು ಸಂಕಷ್ಟಕ್ಕೆ ಒಳಗಾಗಿದ್ದರೂ ಪರಿಹಾರ ಸಿಗದಿರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬೆಂಗಳೂರಿನ ಅಭಿವೃದ್ದಿ ಕುಂಠಿತ ಆಗಿದೆ. ಮೆಟ್ರೋ ದರ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಧಿವೇಶನದಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಲಿವೆ'' ಎಂದು ತಿಳಿಸಿದರು.
ಬಿಜೆಪಿ ಸಂಸದರು, ಶಾಸಕರಿಂದ ಸಿಎಂ ಭೇಟಿ- ಬಿ.ವೈ.ವಿಜಯೇಂದ್ರ: ಇನ್ನೊಂದೆಡೆ, ಬಿಜೆಪಿ ನಾಯಕರ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ 28ರಂದು ನಮ್ಮೆಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಣಕಾಸಿನ ಸಚಿವರೂ ಆದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ'' ಎಂದು ತಿಳಿಸಿದ್ದಾರೆ.

''ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡಬೇಕೆಂದು ಒತ್ತಾಯಿಸಿ ಮನವಿ ನೀಡುತ್ತೇವೆ ಎಂದು ಹೇಳಿದರು. ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಅದರ ಬಗ್ಗೆಯೂ ಚರ್ಚೆ ಆಗಿದೆ ಎಂದರು. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಆಗಬೇಕು. ಗ್ರೇಟರ್ ಬೆಂಗಳೂರು ಪ್ರಸ್ತಾಪ ಕೈಬಿಡಬೇಕು. ಟನೆಲ್ ರಸ್ತೆ ಯೋಜನೆ ಕೈಬಿಟ್ಟು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸರಕಾರ ಚಿಂತಿಸಬೇಕಿದೆ'' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಶ್ವಾನಗಳ ಹಾವಳಿ ತಪ್ಪಿಸಲು ಶೆಲ್ಟರ್ ವ್ಯವಸ್ಥೆ: ಯು.ಟಿ.ಖಾದರ್
''ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚಲೂ ಈ ಸರ್ಕಾರಕ್ಕೆ ಆಗುತ್ತಿಲ್ಲ. ಆದರೆ, ಟನೆಲ್ ರಸ್ತೆ ಕುರಿತು ಮಾತನಾಡುತ್ತಿದ್ದಾರೆ. ಅದರ ಬದಲಿಗೆ ಮೆಟ್ರೋ ಬೋಗಿಗಳನ್ನು ಹೆಚ್ಚಿಸಬೇಕು. ಟ್ರಾಫಿಕ್ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬದಲಿ ಮಾರ್ಗೋಪಾಯಗಳನ್ನು ಚರ್ಚಿಸಬೇಕಿದೆ. ಅವೈಜ್ಞಾನಿಕ ಟನೆಲ್ ರಸ್ತೆ ಯೋಜನೆ ಕೈಬಿಡಬೇಕು ಎಂಬ ಕುರಿತು ಸಮಗ್ರ ಚರ್ಚೆ ಆಗಿದೆ'' ಎಂದು ತಿಳಿಸಿದರು.
ಇ-ಖಾತಾದಿಂದ ತೊಂದರೆ: ಇ-ಖಾತಾದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಗ್ರೇಟರ್ ಬೆಂಗಳೂರು ಎಂಬ ಕಥೆ ಹೇಳಿಕೊಂಡು ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರವು ಬೆಂಗಳೂರಿನ ಉದ್ಧಾರದ ಕಥೆ ಹೇಳುತ್ತ ಚುನಾವಣೆ ಮುಂದೂಡುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು. ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಬೇಕು. ಈ ಬಗ್ಗೆಯೂ ಚರ್ಚೆ ನಡೆದಿದೆ'' ಎಂದು ಹೇಳಿದರು.
ಕೇಂದ್ರ ಸರ್ಕಾರ ಮೆಟ್ರೋ ದರ ಹೆಚ್ಚಿಸಿಲ್ಲ: ''ಮೆಟ್ರೋ ದರ ಏರಿಕೆ ಕುರಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ'' ಎಂದ ವಿಜಯೇಂದ್ರ, ಆರ್.ಅಶೋಕ್ ಅವರು ಈ ಸಭೆಗೆ ಆದಷ್ಟು ಬರುವುದಾಗಿ ತಿಳಿಸಿದ್ದರು. ಅವರು ಬಜೆಟ್ ಕುರಿತ ಪೂರ್ವಭಾವಿ ಸಭೆ ಕರೆದಿದ್ದಾರೆ. ನಾವು ಕೂಡ ಆ ಸಭೆಗೆ ತೆರಳುತ್ತೇವೆ'' ಎಂದು ಪ್ರಶ್ನೆಗೆ ಉತ್ತರಿಸಿದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಶಾಸಕರಾದ ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಎಂ.ಕೃಷ್ಣಪ್ಪ, ರವಿ ಸುಬ್ರಮಣ್ಯ, ಬೈರತಿ ಬಸವರಾಜ್, ಉದಯ ಗರುಡಾಚಾರ್, ಬೆಂಗಳೂರಿನ ಮೂರು ಜನ ಜಿಲ್ಲಾಧ್ಯಕ್ಷರು, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಇದ್ದರು.
ಇದನ್ನೂ ಓದಿ: ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಅಶೋಕ್