ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಸಮುದ್ರ ದಂಡೆಯ ಟೊಂಕಾ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮಂಗಳವಾರ ಪೊಲೀಸ್ ಸರ್ಪಗಾವಲಿನಲ್ಲಿ ಮೋಜಣಿ (ಸರ್ವೆ) ಕಾರ್ಯ ನಡೆಸಲಾಗಿದೆ. ಪ್ರದೇಶದ ಸುತ್ತಮುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಫೆಬ್ರವರಿ 26ರ ರಾತ್ರಿ 10 ಗಂಟೆವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಮೀನುಗಾರ ಮಹಿಳೆಯರು ಮತ್ತು ಮೀನುಗಾರರು ಸಮುದ್ರಕ್ಕೆ ಇಳಿದು ಎದೆಮಟ್ಟದ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಮುದ್ರದ ಅಲೆಗಳು ರಭಸವಾಗಿ ಅಪ್ಪಳಿಸತೊಡಗಿದಂತೆ ಕೆಲ ಮಹಿಳೆಯರು ಆಯತಪ್ಪಿ ನೀರಿನಲ್ಲಿ ಮುಳುಗಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು ತೀವ್ರ ಅಸ್ವಸ್ಥಗೊಂಡಿದ್ದು, ದಡದಲ್ಲಿದ್ದ ಪೊಲೀಸರು ಹಾಗೂ ಸ್ಥಳೀಯರು ಅವರನ್ನು ಎತ್ತಿ ದಡಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು.

ಈ ಹಿಂದೆಯೂ ಮೂರು ಬಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಸರ್ವೆ ಮತ್ತು ರಸ್ತೆ ನಿರ್ಮಾಣ ಕೆಲಸ ಮಾಡಲು ಕಂಪನಿ ಪ್ರಯತ್ನಪಟ್ಟಿತ್ತು. ಮೀನುಗಾರರ ಪ್ರತಿಭಟನೆಯ ನಡುವೆಯೂ ಒಮ್ಮೆ ಕಾಮಗಾರಿಯ ಸಾಮಗ್ರಿಗಳನ್ನು ಸಾಗಿಸಲಾಗಿತ್ತು. ಇನ್ನೊಮ್ಮೆ ಮೋಜಣಿಗೆ ಆರಂಭಿಸಿದ್ದರೂ ನಡೆಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತಳ್ಳಾಟ, ನೂಕಾಟ ಉಂಟಾಗಿ ಕೆಲ ಮೀನುಗಾರರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಈ ಬಗ್ಗೆ ದೂರು, ಪ್ರತಿ ದೂರುಗಳು ದಾಖಲಾಗಿ, ಅನೇಕ ಹೋರಾಟಗಾರರು ಜೈಲುಪಾಲಾಗಿದ್ದರು. ಬಳಿಕ ಹೊನ್ನಾವರ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳ ವಿಚಾರಣೆ ನಡೆದಿತ್ತು. ನಂತರ ಹೋರಾಟಗಾರರಿಗೆ ಮೇಲಿನ ನ್ಯಾಯಾಲಯದಲ್ಲಿ ಕೆಲ ವಿಷಯದಲ್ಲಿ ಜಯ ಲಭಿಸಿದ್ದರೂ, ಸಂಪೂರ್ಣ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ, ಗುತ್ತಿಗೆ ಕಾರ್ಯ ಆಮೆಗತಿಯಲ್ಲಿ ಸಾಗಿ ನನೆಗುದಿಗೆ ಬಿದ್ದಿತ್ತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳು: ಮಂಗಳವಾರ ಮುಂಜಾನೆ ಮೋಜಣಿಗೆ ಮುಂದಾದ ಅಧಿಕಾರಿಗಳಿಗೆ ಹಾಗೂ ಮೀನುಗಾರ ಮಹಿಳೆಯರಿಗೂ ವಾಗ್ವಾದ ನಡೆಯಿತು. ಈ ಹಂತದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ಕೂಡ ನಡೆದು ಪ್ರತಿಭಟನಾಕಾರರು ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಆರಂಭಿಸಿದರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ಭಾಗದ ಎಲ್ಲಾ ಸಮುದಾಯಗಳ ಮೀನುಗಾರರ ಕುಟುಂಬದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೂಡ ಶಾಲೆಗಳಿಗೆ ತೆರಳದೆ ಪಾಲಕರಿಗೆ ಬೆಂಬಲಿಸಿದರು. ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ತೆರಳದೇ ಅಂಗನವಾಡಿ ಖಾಲಿ ಖಾಲಿಯಾಗಿತ್ತು. ಪ್ರತಿಭಟನಾ ಹೋರಾಟದ ಹಿನ್ನೆಲೆಯಲ್ಲಿ ಊರು, ಕೇರಿಗಳು ಜನ ಜಾನುವಾರುಗಳಿಲ್ಲದೇ ಬಿಕೋ ಎನ್ನುತ್ತಿತ್ತು.
ಸರ್ವೆ ಮುಕ್ತಾಯ: ಟೊಂಕಾ ಪ್ರದೇಶದಲ್ಲಿ ಈ ಹಿಂದೆ 50 ಮೀ. ಸರ್ವೆಗೆ ಕಂಪನಿ ಮುಂದಾಗಿತ್ತು. ಆದರೆ ಈ ಬಾರಿ ಸಮುದ್ರದ ಉಬ್ಬರ ಹಿನ್ನೆಲೆಯಲ್ಲಿ ಕೇವಲ 35 ಮೀ. ಸರ್ವೆ ಕಾರ್ಯ ನಡೆದಿದೆ ಎಂದು ಭಟ್ಕಳ ಪ್ರಬಾರಿ ಉಪ ವಿಭಾಗಾಧಿಕಾರಿ ಕಾವ್ಯ ರಾಣಿ ತಿಳಿಸಿದ್ದಾರೆ.
ಸಮುದ್ರದ ದಂಡೆಯ ಗುಂಟ ಸುಮಾರು 2.5 ಕಿ.ಮೀ.ಗಳಷ್ಟು ಸರ್ವೆ ಮಾಡಿ, ಸರ್ವೆ ಕಲ್ಲುಗಳನ್ನು ಹಾಕಲಾಗಿದೆ. ಸುಮಾರು 90ಕ್ಕೂ ಹೆಚ್ಚು ಸಿಮೆಂಟ್ ಕಂಬಗಳನ್ನು ಹುಗಿದು ಗಡಿ ಗುರುತಿಸಲಾಗಿದೆ. ಸರ್ವೆ ವ್ಯಾಪ್ತಿಗೆ ಒಳಪಡುವ ಮನೆಗಳ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅಂಕೋಲಾದ ಕೇಣಿಯಲ್ಲಿ ನಿಷೇಧಾಜ್ಞೆ ಜಾರಿ : ಆದೇಶ ಲೆಕ್ಕಿಸದೇ ಕಡಲತೀರದಲ್ಲಿ ಸೇರಿದ ಜನ
''ಯೋಜನೆಯಲ್ಲಿ ಕೇವಲ 8 ಮನೆಗಳಿಗೆ ಮಾತ್ರ ಹಾನಿಯಾಗುತ್ತವೆ ಎಂದು ತಿಳಿಸಲಾಗಿತ್ತು. ಈಗ ಯೋಜನೆಗಾಗಿ ರಸ್ತೆಯನ್ನು 32 ಮೀಟರ್ ಅಗಲಕ್ಕೆ ರಸ್ತೆ ವಿಸ್ತರಿಸಿ ಸರ್ವೆ ನಡೆಸಲಾಗಿದೆ. ಇದರಿಂದ 121ಕ್ಕೂ ಹೆಚ್ಚು ಮನೆಗಳು ನಾಶಗೊಳ್ಳುತ್ತವೆ. ನಮ್ಮ ಪ್ರಮುಖ ಬೇಡಿಕೆ ಏನೆಂದರೆ ಮೊದಲು ನಮ್ಮ ಸ್ಥಳ ಸರ್ವೆ ಮಾಡಿ. ನಾವು ವಾಸವಾಗಿದ್ದ ಹಿಂದಿನ ಸರ್ವೆ ನಂ. 303 ಎಲ್ಲಿ ಹೋಗಿದೆ? ಆ ಸರ್ವೆ ನಂಬರ್ ಅನ್ನು ತಿದ್ದಿ ಏಕಾಏಕಿ 305 ಸರ್ವೆ ನಂಬರ್ ನೀಡಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಿ. ಮೋಸದಿಂದ ಸರ್ವೆ ನಕಾಶೆ ಸಿದ್ದಪಡಿಸಲಾಗಿದೆ. ಆ ಬಗ್ಗೆ ತನಿಖೆ ನಡೆಯಬೇಕು'' ಎಂದು ಮೀನುಗಾರರ ಮುಖಂಡ ಹಮ್ಜಾ ಪಟೇಲ್ ಆಗ್ರಹಿಸಿದರು.
ನಿಷೇಧಾಜ್ಞೆ ಮುಂದುವರಿಕೆ: ಕಾಮಗಾರಿಯ ಸರ್ವೆ ಸಂಬಂಧ ಕಾಸರಕೋಡ ಸಮುದ್ರ ದಂಡೆಯ ಟೊಂಕಾ ಭಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163ರನ್ವಯ ಹೊರಡಿಸಲಾದ ನಿಷೇದಾಜ್ಞೆಯನ್ನು ಫೆ.25ರ ರಾತ್ರಿ 9 ಗಂಟೆಯಿಂದ ಫೆ.26ರ ರಾತ್ರಿ 10 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದೇಶದಲ್ಲಿ ವಿಧಿಸಲಾದ ನಿಬಂಧನೆಗಳು ಊರ್ಜಿತದಲ್ಲಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ.
ಅಂಕೋಲಾದಲ್ಲೂ ನಿಷೇಧಾಜ್ಞೆ: ಇತ್ತ, ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಅಂಕೋಲಾ ಪುರಸಭೆ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣಕ್ಕೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಂದರು ನಿರ್ಮಾಣ ಪ್ರದೇಶದ ಭೌಗೋಳಿಕ ತಾಂತ್ರಿಕ ಅಧ್ಯಯನ (Geotechnical investigation) ಕಾಮಗಾರಿ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163ರನ್ವಯ ಹೊರಡಿಸಲಾದ ನಿಷೇಧಾಜ್ಞೆಯನ್ನು ಫೆ.25ರ ಸಂಜೆ 6 ಗಂಟೆಯಿoದ ಫೆ.28ರ ಸಂಜೆ 6 ಗಂಟೆಯವರೆಗೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಇದನ್ನೂ ಓದಿ: ಹೊನ್ನಾವರ ಬಂದರು ರಸ್ತೆ ಸರ್ವೆ ವಿರೋಧಿಸಿ ಬೀದಿಗಿಳಿದ ಜನ : ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ