ಬೆಂಗಳೂರು: ದೂರದರ್ಶನ ಕೇಂದ್ರದ ಉನ್ನತ ಹುದ್ದೆಯಲ್ಲಿದ್ದಾಗ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ 12 ವರ್ಷದ ಹಿಂದಿನ ಪ್ರಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅವರಿಗೆ 1.2 ಲಕ್ಷ ರೂ. ದಂಡ ವಿಧಿಸಿ ವಿಚಾರಣಾ ನ್ಯಾಯಾಲಯ ಫೆ.19ರಂದು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಆದರೆ, ಮಾರ್ಚ್ 3ರೊಳಗೆ 1.50 ಲಕ್ಷ ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಡಾ. ಮಹೇಶ್ ಜೋಷಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ದೂರುದಾರ ಎನ್.ಕೆ. ಮೋಹನ್‌ರಾಮ್ ಅವರಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದೆ.
ನಗರದ 14ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯ (ಸಿಸಿಹೆಚ್-28) ಫೆ.19ರಂದು ಹೊರಡಿಸಿರುವ ಆದೇಶಕ್ಕೆ ಮುಂದಿನ ವಿಚಾರಣಾ ದಿನಾಂಕದವರೆಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ದೂರದರ್ಶನದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಡಾ. ಮಹೇಶ್ ಜೋಷಿ ಅವರು ಮೋಹನ್ ರಾಮ್ ಹಾಗೂ ಇತರ ಆರು ಮಂದಿ ಸಹೋದ್ಯೋಗಿಗಳ ವಿರುದ್ಧ 1984ರಲ್ಲಿ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಆ ದೂರಿನ ಆಧಾರದ ಮೇಲೆ ಪೊಲೀಸರು ನ್ಯಾಯಾಲಯದಲ್ಲಿ ಮೋಹನ್ ರಾಮ್ ಮತ್ತಿತರ ಆರು ಜನರ ಮೇಲೆ ಸಂಚು ರೂಪಿಸಿ ನಕಲಿ ದಾಖಲೆಯ ಸೃಷ್ಟಿಸಿ, ನಕಲಿ ಸಹಿ ಹಾಕಿದ್ದಾರೆ ಎಂದು ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಅದನ್ನು ಹೈಕೋರ್ಟ್ ಅದೊಂದು ಸುಳ್ಳು ಪ್ರಕರಣ ಎಂದು ತಿಳಿಸಿ ರದ್ದು ಮಾಡಿತ್ತು. ಜೊತೆಗೆ, ದೂರು ದುರುದ್ದೇಶದ್ದು ಮಾತ್ರವಲ್ಲ, ತನ್ನ ಸಹೋದ್ಯೋಗಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಹಾಕಿದ್ದೆಂದು ತಿಳಿಸಿತ್ತು.
ಈ ಆಧಾರದ ಮೇಲೆ ಮೋಹನ್ ರಾಮ್ ದುರುದ್ದೇಶ ಕೇಸು ದಾಖಲಿಸಿದ್ದ ಮಹೇಶ್ ಜೋಷಿ ವಿರುದ್ಧ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪರಿಹಾರ ಕೋರಿದ್ದರು. ಅದರಂತೆ ಜೋಷಿಗೆ ದಂಡ ವಿಧಿಸಿ ದೂರುದಾರಿಗೆ ಪರಿಹಾರ ನೀಡಲು ಸೂಚಿಸಿತ್ತು. ಇದನ್ನು ಜೋಷಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ವಯಸ್ಸಿನ ತಪ್ಪು ಮಾಹಿತಿ ಆರೋಪ: ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ವಿರುದ್ಧದ ಎಫ್ಐಆರ್ ರದ್ದತಿಗೆ ಹೈಕೋರ್ಟ್ ನಕಾರ