ಬಳ್ಳಾರಿ/ಬೆಂಗಳೂರು/ಬೆಳಗಾವಿ/ಮಂಗಳೂರು: ರಾಜ್ಯಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಬಳ್ಳಾರಿ ನಗರದ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿದ್ದಾರೆ.
ಉಪವಾಸ ಆಚರಣೆಯಲ್ಲಿ ತೊಡಗಿದ ಜನರು ಬೆಳಗ್ಗೆಯಿಂದಲೂ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳಸೇತುವೆ ಬಳಿ ಇರುವ ಶಿವನ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ, ನಗರದ ಬ್ರಾಹ್ಮಣ ಬೀದಿಯಲ್ಲಿರುವ ನಗರೇಶ್ವರ ದೇವಸ್ಥಾನ, ಕಪಗಲ್– ಸಿರಿವಾರ ಗ್ರಾಮದ ಬಳಿ ಇರುವ ಅಡವಿ ಅಮರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಂಗಮೇಶ್ವರ ದೇವಾಲಯ ಹಾಗೂ ಇತರ ಶಿವಾಲಯಗಳಿಗೆ ತೆರಳಿ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ : ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಶಿವಾಲಯಗಳಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರುತ್ತಿವೆ. ಬೆಂಗಳೂರಿನ ಹನುಮಂತನಗರದ ಗವಿಗಂಗಾಧರೇಶ್ವರ ದೇಗುಲ, ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಾಲಯ ಹೆಚ್ಎಎಲ್ ರಸ್ತೆಯ ಮುರುಗೇಶಪಾಳ್ಯದಲ್ಲಿರುವ ಶಿವೋಹಮ್ ದೇವಾಲಯ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಅರ್ಚನೆಗಳು ನಡೆಯುತ್ತಿವೆ. ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ, ನೈವೇದ್ಯ, ಅಭಿಷೇಕ ನೆರವೇರಿಸಿ ದರ್ಶನ ಪಡೆಯುತ್ತಿದ್ದಾರೆ.
ಮುಂಜಾನೆಯೇ ಗವಿಗಂಗಾಧರೇಶ್ವರನಿಗೆ ರುದ್ರಾಭಿಷೇಕ ಮತ್ತು ಬಿಲ್ವಪತ್ರೆಯಿಂದ ವಿಶೇಷವಾದ ಅಭಿಷೇಕ ಮತ್ತು ಅರ್ಚನೆ ಮಾಡಲಾಗಿದೆ. ಇಂದು ಇಡೀ ದಿನ ಶಿವನಿಗೆ ರುದ್ರಾಭಿಷೇಕ, ರುದ್ರಪಾರಾಯಣ ವಿಶೇಷ ಅಲಂಕಾರ, ಪೂಜೆಗಳು ನೆರವೇರಲಿವೆ.

ಬೆಳಗಾವಿಯಲ್ಲಿ ಮಹಾಶಿವರಾತ್ರಿ ಸಂಭ್ರಮ : ಇಲ್ಲಿನ ಪ್ರಸಿದ್ಧ ಕಪಿಲೇಶ್ವರ ಮಂದಿರಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ದಕ್ಷಿಣ ಭಾರತದಲ್ಲಿ ಭಕ್ತರ ಭೂ ಕೈಲಾಸ ಅಂತಲೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ ರಾತ್ರಿ 12 ಗಂಟೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶಿವಲಿಂಗ ಮೂರ್ತಿಗೆ ಅಭಿಷೇಕ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಬಿಲ್ವಪತ್ರೆ ಅರ್ಪಣೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ, ಬಳಿಕ ಮಹಾ ಆರತಿ ಕಾರ್ಯಕ್ರಮ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಅರ್ಚಕರು ನೆರವೇರಿಸಿದರು. ಶಿವರಾತ್ರಿ ಹಿನ್ನೆಲೆ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಆಡಳಿತ ಮಂಡಳಿ ಶೃಂಗರಿಸಿದೆ.
ಬೆಳಗಿನ ಜಾವದಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವರ ದರ್ಶನಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲು ನಿರ್ಮಿಸಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಕಪಿಲೇಶ್ವರನಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡ ಭಾರತದ ಏಕೈಕ ದೇವಸ್ಥಾನ ಎಂಬ ಹೆಗ್ಗಳಿಕೆ ಕಪಿಲೇಶ್ವರಕ್ಕಿದೆ. 1500ನೇ ಇಸವಿಯಲ್ಲಿ ಕಪಿಲ ಮುನಿಗಳ ತಪ್ಪಸ್ಸಿನ ಶಕ್ತಿಯಿಂದ ಶಿವಲಿಂಗ ಮೂರ್ತಿ ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಹೀಗಾಗಿ, ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಈ ಕಪಿಲೇಶ್ವರ ದೇವಸ್ಥಾನಕ್ಕಿದೆ. ಕಪಿಲೇಶ್ವರನ ದರ್ಶನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ.

ಮಂಗಳೂರಿನ ಕದ್ರಿ ಶ್ರೀಮಂಜುನಾಥ ಕ್ಷೇತ್ರದಲ್ಲಿ ಶಿವರಾತ್ರಿ ಸಂಭ್ರಮ: ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮೇಲೈಸಿದ್ದು, ಕರಾವಳಿಯ ಶಿವನ ದೇಗುಲಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಂಗಳೂರಿನ ಕದ್ರಿ ಶ್ರೀಮಂಜುನಾಥ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಕದ್ರಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಏಳು ತೀರ್ಥ ಕೆರೆಯಲ್ಲಿ ಪುಣ್ಯ ಸ್ನಾನಮಾಡಿದರು.
ತೀರ್ಥಬಾವಿಯ ಮೇಲಿರುವ ಶಿವಲಿಂಗಕ್ಕೆ ಭಕ್ತರು ಗೋಮುಖ ತೀರ್ಥದ ನೀರನ್ನು ಅಭಿಷೇಕ ಮಾಡಿದರು. ಬಳಿಕ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಹೆಚ್ಚಿನ ಶಿವಭಕ್ತರಿಂದ ಇಂದು ಉಪವಾಸ ವ್ರತ ಆಚರಣೆ ನಡೆಯಲಿದೆ. ಅಲ್ಲದೆ ರಾತ್ರಿಯಿಡೀ ದೇವಸ್ಥಾನದಲ್ಲಿ ಭಕ್ತರು ಜಾಗರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ಮೈಸೂರು: ತ್ರಿನೇಶ್ವರ ಸ್ವಾಮಿಗೆ 11 ಕೆ.ಜಿ. ತೂಕದ ಚಿನ್ನದ ಮುಖವಾಡ ಧಾರಣೆ: ಇದರ ಇತಿಹಾಸ ಹೀಗಿದೆ