Saree Skin Cancer: ಭಾರತೀಯ ಮಹಿಳೆಯರಿಗೆ ಸೀರೆ ಅಂದ್ರೆ ಪಂಚಪ್ರಾಣ. ಅಷ್ಟೇ ಏಕೆ? ಮಹಿಳೆಯರು ಸೀರೆಯಲ್ಲಿ ದೇವತೆಯಂತೆ ಕಾಣುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗುತ್ತದೆ. ಆದ್ರೆ ಈ ಸೀರೆಯನ್ನು ಬಿಗಿಯಾಗಿ ಉಡುವುದರಿಂದ ಅಪಾಯವೂ ಇದೆ ಎನ್ನುತ್ತದೆ ಒಂದು ಸಂಶೋಧನೆ.
ಸೀರೆಯೊಳಗಿರುವ ಪೆಟಿಕೋಟ್ ಅನ್ನು ಬಹಳ ಬಿಗಿಯಾಗಿ ಕಟ್ಟಿಕೊಂಡರೆ ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಬಿಹಾರ ಮತ್ತು ಮಹಾರಾಷ್ಟ್ರದ ವೈದ್ಯರು ಎಚ್ಚರಿಸಿದ್ದಾರೆ.
ಈ ರೀತಿಯ ಗಂಭೀರ ಸ್ವರೂಪದ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರು ಮಹಿಳೆಯರಿಗೆ ಚಿಕಿತ್ಸೆ ನೀಡಿದ ನಂತರ, ವಾರ್ಧಾದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಬಿಹಾರದ ಮಧುಬನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಎಚ್ಚರಿಕೆ ನೀಡಿದ್ದಾರೆ.
ಏನಿದು ಪೆಟಿಕೋಟ್ ಕ್ಯಾನ್ಸರ್?: ಮಹಿಳೆಯರು ಸಾಮಾನ್ಯವಾಗಿ ಸೀರೆಯೊಳಗಿರುವ ಬಟ್ಟೆಯನ್ನು (ಪೆಟಿಕೋಟ್) ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ವಿಶೇಷವಾಗಿ, ಇದು ಗ್ರಾಮೀಣ ಭಾಗಗಳಲ್ಲಿ ಹೆಚ್ಚು. ಇದರಿಂದಾಗಿ ಉರಿಯೂತಕ್ಕೆ ಸಂಬಂಧಿಸಿದ ನಿರಂತರ ನೋವು ಕಾಡುತ್ತದೆ. ಇದು ಚರ್ಮದ ಹುಣ್ಣು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಚರ್ಮದ ಕ್ಯಾನ್ಸರ್ ಆಗಿಯೂ ಬದಲಾಗುತ್ತದೆ. ಇಂಥ ವಿದ್ಯಮಾನವನ್ನು ಈ ಹಿಂದೆ 'ಸೀರೆ ಕ್ಯಾನ್ಸರ್' ಎಂದು ಹೇಳಲಾಗಿತ್ತು. ಇದೀಗ BMJ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಇದನ್ನು 'ಪೆಟಿಕೋಟ್ ಕ್ಯಾನ್ಸರ್' ಎಂದು ವೈದ್ಯರು ಹೆಸರಿಸಿದ್ದಾರೆ.
ಪ್ರಕರಣ-1: ಮೊದಲನೆಯ ಪ್ರಕರಣದಲ್ಲಿ, 70 ವರ್ಷದ ಮಹಿಳೆಯೊಬ್ಬರು 18 ತಿಂಗಳ ಕಾಲ ಚರ್ಮದ ಹುಣ್ಣು ಹೊಂದಿದ್ದರು. ಇದು ಅವರಿಗೆ ಅಸಹನೀಯ ನೋವು ನೀಡುತ್ತಿತ್ತು. ವಾಸಿಯಾಗದ ಕಾರಣ ವೈದ್ಯರನ್ನು ಸಂಪರ್ಕಿಸಿದ್ದರು. ಪರಿಶೀಲಿಸಿದ ವೈದ್ಯರು, ಆ ವೃದ್ಧೆ ಪೇಟಿಕೋಟ್ ಅನ್ನು ಬಿಗಿಯಾಗಿ ಕಟ್ಟಿಕೊಂಡಿದ್ದರಿಂದ ಸೊಂಟದಲ್ಲಿ ಹುಣ್ಣುಗಳು ಮೂಡಿರುವುದನ್ನು ಕಂಡುಕೊಂಡರು. ನಂತರ ಬಯಾಪ್ಸಿ ನಡೆಸಿ, ಮಾರ್ಜೋಲಿನ್ ಹುಣ್ಣಾಗಿರುವ ಕುರಿತು ಬಹಿರಂಗಪಡಿಸಿದರು. ಸ್ಕ್ವಾಮಸ್ ಸೆಲ್ ಕಾರ್ಸಿನೋಮ (ಅಲ್ಸರೇಟಿಂಗ್ ಸ್ಕಿನ್ ಕ್ಯಾನ್ಸರ್) ಎಂದೂ ಇದನ್ನು ಕರೆಯುತ್ತಾರೆ.
ಪ್ರಕರಣ-2: ಅಂದಾಜು 60ರ ವಯಸ್ಸಿನ ಇನ್ನೊಬ್ಬ ಮಹಿಳೆಗೆ ಚರ್ಮದ ಹುಣ್ಣು ಆಗಿತ್ತು. ಸುಮಾರು ಎರಡು ವರ್ಷಗಳ ಕಾಲ ಈ ಹುಣ್ಣಿನಿಂದ ಬಳಲುತ್ತಿದ್ದರು. 40 ವರ್ಷಗಳಿಂದ ಸಾಂಪ್ರದಾಯಿಕವಾದ 'ಲುಗ್ಡಾ' ಸೀರೆಯನ್ನು ಅವರು ಪ್ರತಿದಿನ ಧರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಸೊಂಟಕ್ಕೆ ಪೆಟಿಕೋಟ್ ಅನ್ನು ಬಿಗಿಯಾಗಿ ಕಟ್ಟುತ್ತಿದ್ದರಂತೆ. ಬಯಾಪ್ಸಿ ಪರೀಕ್ಷೆಯಲ್ಲಿ ಇವರಿಗೆ ಮಾರ್ಜೋಲಿನ್ ಹುಣ್ಣಾಗಿರುವುದು ಗೊತ್ತಾಗಿದೆ. ಮತ್ತಷ್ಟು ಪರೀಕ್ಷೆ ನಡೆಸಿದಾಗ ಅವರಿಗೆ ಕ್ಯಾನ್ಸರ್ ರೋಗ ತಗುಲಿರುವುದು ಬಯಲಾಗಿದೆ. ಮಾರ್ಜೋಲಿನ್ ಹುಣ್ಣು ಅಪರೂಪ, ಆದರೆ ಆಕ್ರಮಣಕಾರಿ. ಇದು ದೀರ್ಘಕಾಲದ ಸುಟ್ಟ ಗಾಯಗಳು, ವಾಸಿಯಾಗದ ಗಾಯಗಳು, ಕಾಲಿನ ಹುಣ್ಣು, ಕ್ಷಯರೋಗ ಚರ್ಮದ ಗಂಟುಗಳು ಮತ್ತು ವ್ಯಾಕ್ಸಿನೇಷನ್ ಮತ್ತು ಹಾವು ಕಡಿತದ ಗುರುತುಗಳಲ್ಲಿ ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
"ಸೊಂಟದ ಮೇಲಿನ ನಿರಂತರ ಒತ್ತಡವು ಸಾಮಾನ್ಯವಾಗಿ ಚರ್ಮದ ಕ್ಷೀಣತೆಗೆ ಕಾರಣವಾಗುತ್ತದೆ. ಇದು ಅಂತಿಮವಾಗಿ ಸವೆತ ಅಥವಾ ಹುಣ್ಣು ರೂಪಿಸುತ್ತದೆ" ಎಂದು ಅವರು ತಿಳಿಸಿದರು. ಈ ಹುಣ್ಣು ಸಾಮಾನ್ಯವಾಗಿ ಬಿಗಿಯಾದ ಬಟ್ಟೆಯಿಂದಾಗುವ ಒತ್ತಡದಿಂದಾಗಿ ಸಂಪೂರ್ಣ ಗುಣವಾಗುವುದಿಲ್ಲ. ದೀರ್ಘಕಾಲದ ಗುಣಪಡಿಸದ ಈ ಗಾಯ ಮಾರಣಾಂತಿಕ ಬದಲಾವಣೆಯನ್ನೂ ಉಂಟುಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ತಡೆಯುವುದು ಹೇಗೆ?: ಚರ್ಮದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀರೆಯ ಕೆಳಗೆ ಸಡಿಲ ಪೆಟಿಕೋಟ್ ಧರಿಸಲು ಮತ್ತು ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೆ ಸಡಿಲ ಬಟ್ಟೆಗಳನ್ನು ಧರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ಆರಂಭಿಕ ಹಂತದಲ್ಲಿ ಪತ್ತೆ, ತಡೆಗಟ್ಟುವಿಕೆ, ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ