ಇತ್ತೀಚಿನ ದಿನಗಳಲ್ಲಿ ನರಹುಲಿ ಅಥವಾ ನರುಳ್ಳಿ ಸಮಸ್ಯೆಗಳಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಕುತ್ತಿಗೆ, ಮುಖ, ಬೆನ್ನು, ಕೈಗಳು ಹೀಗೆ ದೇಹದ ನಾನಾ ಭಾಗಗಳಲ್ಲಿ ಗಂಟಿನ ಆಕಾರದಲ್ಲಿ ನರುಳ್ಳಿಗಳು ಕಾಣಿಸಿಕೊಳ್ಳುತ್ತವೆ. ಇವು ಅಪಾಯಕಾರಿ ಅಲ್ಲದಿದ್ದರು ದೇಹದ ಸೌಂದರ್ಯವನ್ನು ಹಾಳುಗೆಡುತ್ತವೆ. ಇಂತಹ ನರುಳ್ಳಿಗಳನ್ನು ತೊಡೆದುಹಾಕಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವು ನೈಸರ್ಗಿಕವಾದ ಮತ್ತು ಸುಲಭವಾದ ಈ ಸಲಹೆಗಳನ್ನು ಪಾಲಿಸಿದರೆ ಈ ಸಮಸ್ಯೆಯನ್ನು ಶಾಶ್ವತವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ನರುಳ್ಳಿ ಹೇಗೆ ಸಂಭವಿಸುತ್ತದೆ ಮತ್ತು ಇದನ್ನು ಮನೆಮದ್ದಿನಿಂದಲೇ ಪರಿಹರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ನರಹುಲಿ ಅಥವಾ ನರುಳ್ಳಿ ಹೇಗೆ ಸಂಭವಿಸುತ್ತವೆ? ನರಹುಲಿಗಳು HPV (ಹ್ಯೂಮನ್ ಪ್ಯಾಪಿಲೋಮಾ ವೈರಸ್)ನಿಂದ ಉಂಟಾಗುತ್ತವೆ. ಸಾಮಾನ್ಯವಾಗಿ ಈ ವೈರಸ್ ದೂಳಿನಿಂದ ನಮ್ಮ ದೇಹವನ್ನು ಪ್ರವೇಶಿಸಿ ಬಳಿಕ ಹೆಚ್ಚುವರಿ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಕೆಲವರಿಗೆ ಸಣ್ಣ ಮೊಡವೆಗಳಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಸ್ವಲ್ಪ ದೊಡ್ಡ ಮೊಡವೆಗಳಾಗಿ ಗೋಚರಿಸುತ್ತದೆ. ನೈಸರ್ಗಿಕವಾಗಿ ಉಂಟಾಗುವ ಈ ನರುಳ್ಳಿನ್ನು ನಿಸರ್ಗದತ್ತವಾದ ಮನೆ ಮದ್ದಿನಿಂದಲೇ ಇದನ್ನು ಪರಿಹರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.
ನರುಳ್ಳಿ ಪರಿಹಾರಕ್ಕೆ ಮನೆ ಮದ್ದು
ಶುಂಠಿ ಪೇಸ್ಟ್: ಎಲ್ಲಾ ಅಡುಗೆ ಮನೆಗಳಲ್ಲಿ ಶುಂಠಿ ಇದ್ದೇ ಇರುತ್ತದೆ. ಭಕ್ಷ್ಯಗಳನ್ನು ರುಚಿಯಾಗಿಸಲು ಇದನ್ನು ಅಡುಗೆಗೆ ಬಳಸಲಾಗುತ್ತದೆ. ಅಲ್ಲದೇ ಇದು ಯೀಸ್ಟ್ ಸೋಂಕನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜತೆಗೆ ನರುಳ್ಳಿಗೂ ಇದು ಪರಿಣಾಮಕಾರಿ ಮದ್ದಾಗಿದೆ. ಮೊದಲು ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಮೃದುವಾದ ಪೇಸ್ಟ್ ಆಗಿ ತಯಾರಿಸಿಕೊಳ್ಳಿ. ನಂತರ ಅದನ್ನು ನರುಳ್ಳಿಗಳ ಮೇಲೆ ಹಚ್ಚಿ. ಹೀಗೆ ದಿನಕ್ಕೆರಡು ಬಾರಿ ಹಚ್ಚಿದರೆ ಕೆಲವೇ ದಿನಗಳಲ್ಲಿ ನರುಳ್ಳಿಗಳು ಉದುರಿಹೋಗುತ್ತವೆ ಎನ್ನುತ್ತಾರೆ ತಜ್ಞರು. 2022ರಲ್ಲಿ 'ಜರ್ನಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಇಂಟಿಗ್ರೇಟಿವ್ ಮೆಡಿಸಿನ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಿನಕ್ಕೆ ಎರಡು ಬಾರಿ ಶುಂಠಿ ಪೇಸ್ಟ್ ಅನ್ನು ಲೇಪಿಸುವುದರಿಂದ ಮೊಡವೆಗಳ ಸಂಖ್ಯೆ ಮತ್ತು ಗಾತ್ರವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಅನಾನಸ್ ರಸ: ಪ್ರತಿದಿನ ಅನಾನಸ್ (ಪೈನಾಪಲ್) ರಸವನ್ನು ನರುಳ್ಳಿಗಳ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಮಾಯವಾಗುತ್ತವೆ.
ಈರುಳ್ಳಿ ರಸ: ಈರುಳ್ಳಿ ರಸವನ್ನು ತೆಗೆದುಕೊಂಡು ನರುಳ್ಳಿಗಳ ಮೇಲೆ ಪ್ರತಿದಿನ ಹಚ್ಚಬೇಕು. ಪ್ರತಿನಿತ್ಯ ಹೀಗೆ ಮಾಡುವುದರಿಂದ ನರುಳ್ಳಿ ಸಮಸ್ಯೆ ಪರಿಹಾರವಾಗುತ್ತದೆ.
ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅನ್ನು ಮೊಡವೆಗಳು ಇರುವ ಕಡೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಯಮಿತ ಪ್ರಮಾಣದಲ್ಲಿ ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ನರಹುಲಿ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು.
ಉಳಿದಂತೆ ಟೀ ಟ್ರೀ ಆಯಿಲ್ ಕೂಡ ಪ್ರತಿದಿನ ಬಳಸಬಹುದಾಗಿದೆ. ನಿಂಬೆ ರಸವನ್ನೂ ಹಚ್ಚುವುದರಿಂದ ಬೇಗನೆ ನರುಳ್ಳಿ ಉದುರುತ್ತವೆ. ಹಾಗೆ ಎರಡು ಅಥವಾ ಮೂರು ಎಸಳು ಬೆಳ್ಳುಳ್ಳಿಯನ್ನು ಅಗಿದು ಮೊಡವೆಗಳು ಇರುವ ಜಾಗದಲ್ಲಿ ಲೇಪಿಸಿದರೆ ಬೇಗ ಕಡಿಮೆಯಾಗುತ್ತದೆ.
ಸೂಕ್ಷ್ಮ ತ್ವಚೆ ಹೊಂದಿರುವವರು ಪ್ರತಿದಿನ ಅಲೋವೆರಾ ಜೆಲ್ ಅನ್ನು ಹಚ್ಚಬಹುದಾಗಿದೆ. ಅಲೋವೆರಾ ಕೇವಲ ಮೊಡವೆಗಳಿಗೆ ಮಾತ್ರವಲ್ಲದೆ ತ್ವಚೆಯನ್ನು ಸ್ವಚ್ಛವಾಗಿಡಲು ಮತ್ತು ಮುಖದ ಕಾಂತಿ ಹೆಚ್ಚಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಸೂಚನೆ: ಈ ಎಲ್ಲಾ ಸಲಹೆಗಳು ಕೇವಲ ಮಾಹಿತಿಗಾಗಿ. ಈ ಮನೆಮದ್ದು ಬಳಸುವ ಮುನ್ನ ಸಂಬಂಧಿಸಿದ ತಜ್ಞವೈದ್ಯರನ್ನು ಭೇಟಿ ಮಾಡಿ.
ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಹೆಚ್ಚಳ: ವೈದ್ಯರ ಎಚ್ಚರಿಕೆ