'ಸಿ', ಶೀರ್ಷಿಕೆ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ಕನ್ನಡ ಚಿತ್ರ. ತನ್ನ ಹಾಡುಗಳು ಮತ್ತು ಟೀಸರ್ ಮೂಲಕ ಈ ಸಿನಿಮಾ ಸದ್ದು ಮಾಡಿದೆ. ಹೊಸಬರಹ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟ್ರೇಲರ್ ಅನಾವರಣಗೊಳಿಸಿರುವ ಚಿತ್ರತಂಡ ಶೀಘ್ರದಲ್ಲೇ ಅಭಿಮಾನಿಗಳೆದುರು ಬರಲು ಸಜ್ಜಾಗಿದೆ. ಇತ್ತೀಚೆಗೆ 'ಸಿ' ಸಿನಿಮಾದ ಟ್ರೇಲರ್ ಅನ್ನು ಜನಪ್ರಿಯ ನಟ ರಾಜವರ್ಧನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರದ ಮೇಲಿನ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದೆ.
ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ನಟ ರಾಜವರ್ಧನ್, 'ಟ್ರೇಲರ್ ಎಮೋಷನಲ್ ಆಗಿದೆ. ಚಿತ್ರದ ಮೂಲಕ ಏನೋ ಒಂದು ವಿಷಯ ಹೇಳಹೊರಟಿದ್ದಾರೆ. ಎಲ್ಲರೂ ಸಿನಿಮಾ ವೀಕ್ಷಿಸಿ' ಎಂದು ತಿಳಿಸಿದರು. ನಿರ್ಮಾಪಕ ಕೃಷ್ಣೇಗೌಡ ಮಾತನಾಡಿ, 'ಎಲ್ಲರೂ ಸಿನಿಮಾ ನೋಡಿ, ನಿರ್ಮಾಪಕರನ್ನು ಉಳಿಸಿ' ಎಂದು ಕೇಳಿಕೊಂಡರು.
'ಸಿ', ಕಿರಣ್ ಸುಬ್ರಮಣಿ ನಿರ್ದೇಶನದ ಚೊಚ್ಚಲ ಚಿತ್ರ. ಕಿರಣ್ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಬೆಳ್ಳಿ ತೆರೆಮೇಲೆ ಅಬ್ಬರಿಸಲು ಸಜ್ಜಾಗೋ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ.
ಸಿನಿಮಾದ ನಿರ್ದೇಶಕ ಹಾಗೂ ನಟ ಕಿರಣ್ ಮಾತನಾಡಿ, 'ಸಿ' ಎಂದರೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೇಲರ್ನಲ್ಲಿ ಒಂದು ಸಿ ಬಗ್ಗೆ ಮಾತ್ರ ಬಿಟ್ಟುಕೊಟ್ಟಿದ್ದೇವೆ. ಮತ್ತೆರಡು ಸಿ ಹೇಳುತ್ತದೆ ಎಂಬುದನ್ನು ಥಿಯೇಟರ್ನಲ್ಲೇ ನೋಡಬೇಕು. ಸಿನಿಮಾ ಪ್ರಾರಂಭ ಆದಾಗ 8 ಪ್ರೊಡ್ಯೂರ್ಸ್ ಇದ್ದರು. ಆದರೆ ಕಾರಣಾಂತರಗಳಿಂದ ಎಲ್ಲರೂ ಹೊರಟು ಹೋದರು. ನಮ್ಮ ಈ ಸಿನಿಮಾ ವೀಕ್ಷಿಸಿ ಬೆಂಬಲಿಸಿ ಎಂದು ಕೇಳಿಕೊಂಡರು.
ನಟ ಪ್ರಶಾಂತ್ ಮಾತನಾಡಿ, ಈ ಸಿನಿಮಾವನ್ನು ಅಪ್ಪ-ಮಗಳಿಗಾಗಿ ಮಾಡಿದ್ದು. ಚಿತ್ರದಲ್ಲಿ ನಾನು ವಿಭಿನ್ನ ಪಾತ್ರ ನಿರ್ವಹಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದ್ವಿಪಾತ್ರದಲ್ಲಿ ವಿಜಯ್ ರಾಘವೇಂದ್ರ, ರಂಜಿನಿ ರಾಘವನ್: 'ಸ್ವಪ್ನ ಮಂಟಪ'ಕ್ಕೆ ಯು ಸರ್ಟಿಫಿಕೇಟ್ - Swapna Mantapa
ಸದ್ಯ ರಿಲೀಸ್ ಆಗಿರುವ ಟ್ರೇಲರ್ ನೋಡುತ್ತಿದ್ದರೆ ಇದು ಅಪ್ಪ-ಮಗಳ ಬಾಂಧವ್ಯದ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಕಣ್ಣು ಕಾಣದ ಮಗಳ ಆಸೆಯನ್ನು ಈಡೇರಿಸಲು ಹೋರಾಡುವ ಅಪ್ಪನ ಪಾತ್ರದಲ್ಲಿ ಸುಬ್ರಮಣಿ ಕಾಣಿಸಿಕೊಂಡಿದ್ದಾರೆ. ಮಗಳ ಪಾತ್ರದಲ್ಲಿ ಬಾಲ ನಟಿ ಸಾನ್ವಿತಾ ಅಭಿನಯಿಸಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಪ್ರಶಾಂತ್, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಎ ಜಿ ಸುಬ್ರಮಣಿ ಬಂಡವಾಳ ಹೂಡಿದ್ದಾರೆ. ಹಾಡು, ಟೀಸರ್, ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹೊಸಬರ 'ಸಿ' ಚಿತ್ರ ಇದೇ 23ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ. ವಿಭಿನ್ನ ಶೀರ್ಷಿಕೆಯ ಈ ಚಿತ್ರಕ್ಕೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕು.