ಪಾಟ್ನಾ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಸ ಹೊಸ ಸಂಗತಿಗಳು ಬಹಿರಂಗವಾಗುತ್ತಿವೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಸೆಕ್ರೆಟರಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮೊದಲು ಆರ್ಜೆಡಿ ನಾಯಕ ಸಿಎಂ ನಿತೀಶ್ಕುಮಾರ್ ಪಕ್ಷದ ಮೇಲೆ ಆರೋಪ ಮಾಡಿದ್ದರು.
ಬಿಹಾರದ ಉಪಮುಖ್ಯಮಂತ್ರಿ ವಿಜಯ್ ವರ್ಗೀಯ ಸಿನ್ಹಾ ಮತ್ತು ಜೆಡಿಯು ಮುಖ್ಯ ವಕ್ತಾರ ನೀರಜ್ ಕುಮಾರ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ತೇಜಸ್ವಿ ಯಾದವ್ ಅವರ ಸೆಕ್ರೆಟರಿ ಅಕ್ರಮ ನಡೆಸಿದ ವಿದ್ಯಾರ್ಥಿಗಳಿಗೆ ಎನ್‌ಎಚ್‌ಎಐ ಅತಿಥಿ ಗೃಹದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೇ 1 ರಂದು ತೇಜಸ್ವಿ ಯಾದವ್ ಅವರ ಸಹಾಯಕ ಕಾರ್ಯದರ್ಶಿ ಪ್ರೀತಮ್ ಕುಮಾರ್ ಅವರು ಆರೋಪಿ ಪ್ರದೀಪ್ಕುಮಾರ್ ಅವರ ಸಂಖ್ಯೆಯನ್ನು ನೀಡಿ ರೂಮ್ ಕಾಯ್ದಿರಿಸಲು ಸೂಚಿಸಿದ್ದರು. ಅದೇ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಲಾಗಿದೆ. ಈ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಅತಿಥಿ ಗೃಹ ಕೊಠಡಿಯನ್ನು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಬಳಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದು, ಇದೆಲ್ಲವೂ ಬಹಿರಂಗವಾಗಿದೆ. ಈ ಕೊಠಡಿಯನ್ನು ಕಾಯ್ದಿರಿಸಿದ್ದು ತೇಜಸ್ವಿ ಯಾದವ್ ಅವರ ಸೆಕ್ರೆಟರಿ ಪ್ರೀತಮ್ ಕುಮಾರ್ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ವಿಪಕ್ಷದಲ್ಲಿರುವ ತೇಜಸ್ವಿ ಯಾದವ್ ಅವರು ತಮ್ಮ ಆಪ್ತರ ಮೂಲಕ ಈ ಕೆಲಸ ಮಾಡಿಸಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ವಿಜಯ್ ಸಿನ್ಹಾ ಒತ್ತಾಯಿಸಿದ್ದಾರೆ.
ಜೆಡಿಯು ವಕ್ತಾರ ಮತ್ತು ಎಂಎಲ್‌ಸಿ ನೀರಜ್ ಕುಮಾರ್ ಅವರು ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿ, ಕೆಲವರು ಅಧಿಕಾರ ಇಲ್ಲದೇ ಇರಲಾರರು. ವಿರೋಧ ಪಕ್ಷದಲ್ಲಿದ್ದರೂ ಅಕ್ರಮ ನಡೆಸಲು ಮುಂದಾಗುತ್ತಾರೆ. ಆರ್ಥಿಕ ಅಪರಾಧಗಳ ವಿಭಾಗವು ನೀಟ್ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿದೆ. ಇದು ಸ್ವಯಂಪ್ರೇರಿತ ತನಿಖೆಯಾಗಿದೆ. ಈ ಕುರಿತು ನ್ಯಾಯಾಲಯವೂ ಆದೇಶಿಸಿಲ್ಲ ಅಥವಾ ಪ್ರತಿಪಕ್ಷಗಳು ತನಿಖೆಗೆ ಒತ್ತಾಯಿಸಿಲ್ಲ. ಆದಾಗ್ಯೂ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.
ಇದನ್ನೂ ಓದಿ: ಬಿಹಾರದಲ್ಲಿ 'ನೀಟ್' ಕಿಂಗ್ಪಿನ್, ಪರೀಕ್ಷಾರ್ಥಿಗಳು ಸೇರಿ ಹಲವರ ಬಂಧನ: ₹32 ಲಕ್ಷಕ್ಕೆ ಡೀಲ್ - NEET Row