ನವದೆಹಲಿ: ತ್ರಿವಳಿ ತಲಾಖ್ ಹೇಳಿದ್ದಕ್ಕಾಗಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅಡಿಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 2019 ರ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
1991 ರ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದಾಖಲಿಸಲಾದ 12 ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ ಅವರ ನ್ಯಾಯಪೀಠ, ಬಾಕಿ ಇರುವ ತ್ರಿವಳಿ ತಲಾಖ್ ಪ್ರಕರಣಗಳು ಮತ್ತು ಹೈಕೋರ್ಟ್ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
"ಎರಡೂ ಪಕ್ಷಗಳು ಲಿಖಿತ ಹೇಳಿಕೆಗಳನ್ನು ದಾಖಲಿಸಬೇಕು. ದಾಖಲಾದ ಎಫ್ಐಆರ್ಗಳ ಸಂಖ್ಯೆಯ ಡೇಟಾ ನಮಗೆ ನೀಡಿ" ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನಿರ್ದಿಷ್ಟ ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನು ದಂಡಿಸುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ. ಇದು ಗಂಭೀರ ಸಾರ್ವಜನಿಕ ಅಶಾಂತಿಗೆ ಕಾರಣವಾಗಬಹುದು ಮತ್ತು ಇದನ್ನು ನಿಯಂತ್ರಿಸದಿದ್ದರೆ, ಸಮಾಜದಲ್ಲಿ ಧ್ರುವೀಕರಣ ಮತ್ತು ಅಸಂಗತತೆಗೆ ಕಾರಣವಾಗಬಹುದು ಎಂದು ಅರ್ಜಿದಾರರು ವಾದಿಸಿದರು.
ಶಾಯರಾ ಬಾನು ಪ್ರಕರಣದಲ್ಲಿ ತ್ವರಿತ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಈಗಾಗಲೇ ಘೋಷಿಸಿರುವುದರಿಂದ, ಹೊಸ ಕಾನೂನು ಜಾರಿಗೊಳಿಸುವ ಯಾವುದೇ ಅಗತ್ಯವಿಲ್ಲ. ಈ ಕಾಯ್ದೆಯ ಹಿಂದಿನ ಉದ್ದೇಶ ತ್ರಿವಳಿ ತಲಾಖ್ ರದ್ದುಗೊಳಿಸುವುದಲ್ಲ, ಬದಲಾಗಿ ಮುಸ್ಲಿಂ ಗಂಡಂದಿರನ್ನು ಶಿಕ್ಷಿಸುವುದಾಗಿದೆ ಎಂದು ಅವರು ವಾದಿಸಿದರು.
ಅರ್ಜಿದಾರರು ತ್ರಿವಳಿ ತಲಾಖ್ ಪದ್ಧತಿಯ ಅಪರಾಧೀಕರಣ ಮಾತ್ರ ಪ್ರಶ್ನಿಸುತ್ತಿದ್ದಾರೆ, ಹೊರತಾಗಿ ಈ ಪದ್ಧತಿ ಸಮರ್ಥಿಸುತ್ತಿಲ್ಲ ಎಂಬುದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಗಮನಿಸಿತು.
"ಇಲ್ಲಿ ಹಾಜರಿರುವ ಯಾವುದೇ ವಕೀಲರು ಈ ಪದ್ಧತಿಯು ಸರಿಯಾಗಿದೆ ಎಂದು ಹೇಳುತ್ತಿಲ್ಲ ಎಂಬುದು ನನಗೆ ಖಾತ್ರಿಯಿದೆ. ಆದರೆ ಈ ಪದ್ಧತಿಯನ್ನೇ ನಿಷೇಧಿಸಿರುವಾಗ ಅದನ್ನು ಅಪರಾಧೀಕರಿಸಬಹುದೇ ಎಂದು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಏಕಕಾಲದಲ್ಲಿ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ" ಎಂದು ಸಿಜೆಐ ಖನ್ನಾ ಹೇಳಿದರು. ಮಾರ್ಚ್ 17 ರಿಂದ ಪ್ರಾರಂಭವಾಗುವ ವಾರದಲ್ಲಿ ಅರ್ಜಿಗಳ ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.
ಇದನ್ನೂ ಓದಿ : '2024ರ ಬಿಜೆಪಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ': ತಮ್ಮ ಹೊಸ ಪುಸ್ತಕದಲ್ಲಿ ಸಿಎಂ ಮಮತಾ ಆರೋಪ - MAMATA BANERJEE NEW BOOK