2024ರ ಬಿಗ್ ಪ್ರಾಜೆಕ್ಟ್ 'ಪುಷ್ಪ 2: ದಿ ರೂಲ್' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ. ಥಿಯೇಟರ್ಗಳಲ್ಲಿ ಅಭೂತಪೂರ್ವ ಸಿನಿ ಅನುಭವ ಒದಗಿಸಿರುವ ಸಿನಿಮಾ ಅದ್ಯಾವಾಗ ಒಟಿಟಿ ಪ್ರವೇಶಿಸಲಿದೆ ಎಂದು ಸಿನಿಪ್ರಿಯರು ಕಾತರರಾಗಿದ್ದರು. ಫೈನಲಿ, ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾ ಒಟಿಟಿ ಪ್ರವೇಶಿಸಿದೆ.
ಹೌದು, ಬ್ಲಾಕ್ಬಸ್ಟರ್ 'ಪುಷ್ಪ 2: ದಿ ರೂಲ್' ಅಧಿಕೃತವಾಗಿ ನೆಟ್ಫ್ಲಿಕ್ಸ್ ಪ್ರವೇಶಿಸಿದೆ. ಅದು ಕೂಡಾ ರೀಲೋಡೆಡ್ ವರ್ಷನ್ನಲ್ಲಿ. ಇದು ಒಟಿಟಿಯಲ್ಲಿ ಸೀಕ್ವೆಲ್ ವೀಕ್ಷಿಸೋ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪುಷ್ಪ ಸೀಕ್ವೆಲ್ ತನ್ನ ಸ್ಟೋರಿಲೈನ್ ಹಾಗೂ ಭರ್ಜರಿ ಆ್ಯಕ್ಷನ್ಗಳಿಂದ ಪ್ರೇಕ್ಷಕರನ್ನು ಮೋಡಿ ಮಾಡಿದೆ.
ಹಿಂದೆಂದೂ ನೋಡಿರದ ದೃಶ್ಯಗಳು ಒಟಿಟಿಯಲ್ಲಿ : ಚಿತ್ರಮಂದಿರದ ಆವೃತ್ತಿಯು 200 ನಿಮಿಷಗಳದ್ದಾಗಿತ್ತು. ಆದರೆ ಜನವರಿ 17, 2025ರಂದು ಬಿಡುಗಡೆಯಾದ "ರೀಲೋಡೆಡ್ ವರ್ಷನ್"ನೊಂದಿಗೆ ಸಿನಿಮಾದ ರನ್ಟೈಮ್ 220 ನಿಮಿಷಗಳಾಯಿತು. ಇದೀಗ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿರುವ ಸಿನಿಮಾದ ರನ್ಟೈಮ್ 223 ನಿಮಿಷಗಳದ್ದು. ಹಿಂದೆಂದೂ ನೋಡಿರದ ದೃಶ್ಯಗಳನ್ನು ಒಟಿಟಿ ವರ್ಷನ್ ಒಳಗೊಂಡಿದೆ.
ಬಹು ಭಾಷೆಗಳಲ್ಲಿ ಸಿನಿಮಾ : ವಿವಿಧ ಭಾಷೆಯ ಪ್ರೇಕ್ಷಕರನ್ನು ಸೆಳೆಯೋ ಸಲುವಾಗಿ, 'ಪುಷ್ಪ 2: ದಿ ರೂಲ್' ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲೀಗ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ ಆವೃತ್ತಿ ಶೀಘ್ರದಲ್ಲೇ ಬರಲಿದೆ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ.
ತಾರೆಯರು ಮತ್ತು ಕಥಾಹಂದರ : ಸುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ, ಅಲ್ಲು ಅರ್ಜುನ್ ನಿರ್ವಹಿಸಿದ ಪುಷ್ಪ ರಾಜ್ ಪಾತ್ರದ ರೋಮಾಂಚಕ ಪ್ರಯಾಣವನ್ನು ತಿಳಿಸಿದೆ. ಪುಷ್ಪ ಸೀಕ್ವೆಲ್ನಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ (ಪುಷ್ಪನ ಪತ್ನಿ) ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡರೆ, ಪುಷ್ಪನ ಶತ್ರು ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ಫಹಾದ್ ಫಾಸಿಲ್ ಮುಂದುವರಿಸಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ರಾವ್ ರಮೇಶ್ ಅವರಂತಹ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಚೆಲುವೆ ಮಹಿರಾ ಶರ್ಮಾ ಪ್ರೀತಿಯಲ್ಲಿ ಕ್ರಿಕೆಟರ್ ಮೊಹಮ್ಮದ್ ಸಿರಾಜ್?
'ಪುಷ್ಪ 2: ದಿ ರೂಲ್' ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಈ ಚಿತ್ರವು ತನ್ನ 56ನೇ ದಿನದಂದು ಅಂದಾಜು 0.17 ಕೋಟಿ ರೂ. ಗಳಿಸಿದೆ. ಒಟ್ಟು ದೇಶೀಯ ಕಲೆಕ್ಷನ್ 1,232.94 ಕೋಟಿ ರೂಪಾಯಿಗೆ ತಲುಪಿದೆ. ಜಾಗತಿಕವಾಗಿ 1,800 ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾರ ನಡೆಸಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಕ್ಯಾನ್ಸರ್ ಗೆದ್ದು ಬಾಸ್ನಂತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಶಿವಣ್ಣ; 'ಮಹಾ ಮನರಂಜನೆ'ಗೆ ನೀವು ರೆಡಿಯಾಗಿ!