ನವದೆಹಲಿ: ಕ್ಯಾನ್ಸರ್ಗೆ ಕಾರಣವಾಗುವ ಬಣ್ಣಗಳಿಂದ ಕಲುಷಿತಗೊಂಡಿರುವ ಕೈಗಾರಿಕಾ ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುವ ವಿನೂತನ ಪ್ರಕ್ರಿಯೆಯೊಂದನ್ನು ಆವಿಷ್ಕರಿಸಿರುವುದಾಗಿ ರೂರ್ಕೆಲಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಗುರುವಾರ ಪ್ರಕಟಿಸಿದ್ದಾರೆ.
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಬೆಂಬಲಿತ ಸಂಶೋಧನೆಯು, ನ್ಯಾನೊಕಂಪೊಸಿಟ್ ಆಧಾರಿತ ಸೆರಾಮಿಕ್ ಪೊರೆಗಳನ್ನು ಮೈಕ್ರೋಬಬಲ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವುದರಿಂದ ನೀರಿನಿಂದ ಬಣ್ಣದ ಅಂಶಗಳನ್ನು ತೆಗೆದುಹಾಕುವ ದಕ್ಷತೆಯನ್ನು ಹೆಚ್ಚಿಸಬಹುದು ಎಂದು ತೋರಿಸಿದೆ.
ಜವಳಿ ಮತ್ತು ಬಣ್ಣ ತಯಾರಿಕೆಯಂತಹ ಕೈಗಾರಿಕೆಗಳಿಂದ ಬರುವ ತ್ಯಾಜ್ಯನೀರು ಸಾಮಾನ್ಯವಾಗಿ ಹಾನಿಕಾರಕ ಬಣ್ಣಗಳನ್ನು ಹೊಂದಿರುತ್ತದೆ. ಇವುಗಳನ್ನು ಸಾಂಪ್ರದಾಯಿಕ ಫಿಲ್ಟರ್ ವಿಧಾನಗಳಿಂದ ತೆಗೆದುಹಾಕುವುದು ಬಹಳ ಕಷ್ಟ. ಬಿಸ್ಮಾರ್ಕ್ ಬ್ರೌನ್ ಆರ್ ನಂತಹ ಬಣ್ಣಗಳು ಮೈಕ್ರೋಫಿಲ್ಟರೇಶನ್ ಪೊರೆಗಳ ಮೂಲಕ ಹಾದುಹೋಗುವಷ್ಟು ಚಿಕ್ಕದಾಗಿರುತ್ತವೆ. ಹೀಗಾಗಿ ಇವನ್ನು ಫಿಲ್ಟರ್ ಮಾಡುವುದು ವಿಶೇಷವಾಗಿ ಸವಾಲಾಗಿದೆ. ಈ ಬಣ್ಣಗಳು ಅವುಗಳ ತೀವ್ರವಾದ ಗಾಢತೆ ಮತ್ತು ಸಂಭಾವ್ಯ ಕ್ಯಾನ್ಸರ್ ಕಾರಕ ಗುಣಲಕ್ಷಣಗಳಿಂದಾಗಿ ಗಮನಾರ್ಹ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ನೇರಳಾತೀತ (ಯುವಿ) ಬೆಳಕನ್ನು ಅವಲಂಬಿಸಿರುವಂಥ ಸಾಂಪ್ರದಾಯಿಕ ಫಿಲ್ಟರ್ ವಿಧಾನಗಳಲ್ಲಿ, ವಿಶೇಷವಾಗಿ ಬಣ್ಣದ ಕಣಗಳನ್ನು ಬೇರ್ಪಡಿಸುವುದು ಕಷ್ಟಕರ. ಈ ಸವಾಲುಗಳನ್ನು ಎದುರಿಸಲು, ವಿಜ್ಞಾನಿಗಳ ತಂಡವು ಎರಡು ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಅತ್ಯಾಧುನಿಕ ಫಿಲ್ಟರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಈ ಫಿಲ್ಟರ್ ವ್ಯವಸ್ಥೆಯಲ್ಲಿ ಸಂಯೋಜಿಸಲಾದ ಮೊದಲನೆಯ ತಂತ್ರಜ್ಞಾನ ಹೀಗಿದೆ: ಕೈಗಾರಿಕಾ ತ್ಯಾಜ್ಯದಿಂದ ಪಡೆದ ಝಿಯೋಲೈಟ್ ಮತ್ತು ಜಿಂಕ್ ಆಕ್ಸೈಡ್ ನ್ಯಾನೊಕಾಂಪೊಸೈಟ್ನಿಂದ ಲೇಪಿತ ಸೆರಾಮಿಕ್ ಪೊರೆಯನ್ನು ಬಳಸುವುದು. ಈ ಫೋಟೋಕ್ಯಾಟಲಿಸ್ಟ್ ಬೆಳಕಿಗೆ ಒಡ್ಡಿಕೊಂಡಾಗ ಬಣ್ಣದ ಅಣುಗಳನ್ನು ಒಡೆಯಬಹುದು.
ಇನ್ನು ಎರಡನೆಯ ತಂತ್ರಜ್ಞಾನ ಹೀಗಿದೆ: ಇದು ಸಾಮೂಹಿಕ ವರ್ಗಾವಣೆಯನ್ನು ಹೆಚ್ಚಿಸಲು ಮತ್ತು ಸ್ಥಗಿತ ಪ್ರಕ್ರಿಯೆಯನ್ನು ಸುಧಾರಿಸಲು ಸರಳ ಏರ್ ಡಿಫ್ಯೂಸರ್ ಮೂಲಕ ಉತ್ಪತ್ತಿಯಾಗುವ ಮೈಕ್ರೋಬಬಲ್ ಬಳಸುವುದನ್ನು ಒಳಗೊಂಡಿದೆ.
ಅಧ್ಯಯನದಲ್ಲಿ ಸ್ಥಳೀಯ ಡೈಯಿಂಗ್ ಕಾರ್ಖಾನೆಯಿಂದ ಸಿಮ್ಯುಲೇಟೆಡ್ ಮತ್ತು ನೈಜ ತ್ಯಾಜ್ಯನೀರನ್ನು ಬಳಸಿಕೊಂಡು ನಿರಂತರ ಟ್ಯಾಂಜೆನ್ಷಿಯಲ್ ಫ್ಲೋ ಮೆಂಬ್ರೇನ್ ಫೋಟೋರಿಯಾಕ್ಟರ್ ಅನ್ನು ವಿನ್ಯಾಸಗೊಳಿಸಲಾಯಿತು ಮತ್ತು ಪರೀಕ್ಷಿಸಲಾಯಿತು.
ಸಂಶೋಧನೆಯ ಬಗ್ಗೆ ಮಾತನಾಡಿದ ಎನ್ ಐಟಿಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸುಜಿತ್ ಸೇನ್, "ನಮ್ಮ ಹೈಬ್ರಿಡ್ ವ್ಯವಸ್ಥೆಯು ಕೇವಲ 90 ನಿಮಿಷಗಳಲ್ಲಿ ಬಿಸ್ಮಾರ್ಕ್ ಬ್ರೌನ್ ಆರ್ ನ ಶೇಕಡಾ 95.4 ರಷ್ಟು ಡಿಕಲರೈಸೇಶನ್ ಮಾಡಿದೆ ಮತ್ತು ಶೇಕಡಾ 94 ರಷ್ಟು ರಾಸಾಯನಿಕ ಆಮ್ಲಜನಕದ ಬೇಡಿಕೆಯನ್ನು (ಸಿಒಡಿ) ತೆಗೆದುಹಾಕಿದೆ" ಎಂದು ಹೇಳಿದರು.
"ನ್ಯಾನೊಕಂಪೊಸೈಟ್ ಗೋಚರ ಬೆಳಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಈ ವಿಧಾನವು ಪ್ರಾಯೋಗಿಕ ತ್ಯಾಜ್ಯನೀರು ಸಂಸ್ಕರಣಾ ಅನ್ವಯಿಕೆಗಳಿಗೆ ಸೂಕ್ತವಾಗಿದೆ" ಎಂದು ಅವರು ತಿಳಿಸಿದರು.
ಈ ಹೈಬ್ರಿಡ್ ವ್ಯವಸ್ಥೆಯ ಸಂಭಾವ್ಯ ಅನ್ವಯಗಳು ವಿಶಾಲವಾಗಿವೆ. ಇದು ಹೆಚ್ಚಾಗಿ ದುಬಾರಿ ರಾಸಾಯನಿಕಗಳು ಮತ್ತು ಸಂಕೀರ್ಣ ಉಪಕರಣಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ ಆಕ್ಸಿಡೀಕರಣ ವಿಧಾನಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ ಪರಿಣಾಮಕಾರಿ ಪರ್ಯಾಯವನ್ನು ನೀಡುತ್ತದೆ. ಈ ಸಂಶೋಧನಾ ವರದಿಯು ಜರ್ನಲ್ ಆಫ್ ಎನ್ವಿರಾನ್ ಮೆಂಟಲ್ ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ : ಚೀನಾದ DeepSeek ತರಬೇತಿಗೆ Chat GPT ಡೇಟಾ ಕಳವು ಶಂಕೆ: ತನಿಖೆಗೆ ಮುಂದಾದ OpenAI - DEEPSEEK AI