ನವದೆಹಲಿ: ಯಮುನಾ ನದಿಯಲ್ಲಿ ಬಿಜೆಪಿ ವಿಷ ಹಾಕಿದೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಸ್ಪಷ್ಟನೆಗೆ ಚುನಾವಣಾ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಮತ್ತೊಮ್ಮೆ ಸಾಕ್ಷ್ಯ ಸಮೇತ ಸ್ಪಷ್ಟವಾಗಿ ಉತ್ತರ ನೀಡಲು ಗಡುವು ನೀಡಿದೆ.
ಯಮುನಾ ನದಿಯಲ್ಲಿ ಹೆಚ್ಚಿದ ಅಮೋನಿಯಾ ಅಂಶ ಮತ್ತು ನದಿಯಲ್ಲಿ ಬಿಜೆಪಿ ವಿಷ ಹಾಕಿದೆ ಎಂಬ ತಮ್ಮ ಆರೋಪ ಮಿಶ್ರಣ ಮಾಡದಂತೆ ಚುನಾವಣಾ ಆಯೋಗವು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ಗೆ ತಾಕೀತು ಮಾಡಿದೆ. ಹರಿಯಾಣ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಮಾತ್ರ ವಿವರಣೆ ನೀಡಲು ಮತ್ತೊಂದು ಅವಕಾಶ ನೀಡಿದೆ.
ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್ಗೆ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಚುನಾವಣಾ ಆಯೋಗಕ್ಕೆ ಸ್ಪಷ್ಟನೆಯ ಉತ್ತರ ನೀಡಿದ್ದರು. ಇದು ಅಸಮಂಜಸವಾಗಿದೆ ಎಂದಿರುವ ಆಯೋಗ, ಯಮುನಾಗೆ ವಿಷ ಹಾಕಿದಲ್ಲಿ ಅದರ ಪ್ರಮಾಣ, ಸ್ವರೂಪ ಮತ್ತು ವಿಧಾನದ ಬಗ್ಗೆ ನಿರ್ದಿಷ್ಟ ಮತ್ತು ಸ್ಪಷ್ಟವಾದ ವಾಸ್ತವಿಕ ಪುರಾವೆಗಳನ್ನು ಒದಗಿಸುವಂತೆ ಕೇಳಿದೆ.
ಜನವರಿ 31ರ ಬೆಳಗ್ಗೆ 11 ಗಂಟೆಯೊಳಗೆ ದೆಹಲಿ ಜಲ ಮಂಡಳಿ ಸಿಬ್ಬಂದಿಯಿಂದ ಯಮುನಾ ನದಿಯಲ್ಲಿ ವಿಷ ಇರುವ ಬಗ್ಗೆ ತಜ್ಞರಿಂದ ಪರೀಕ್ಷೆ ನಡೆಸಿ ಅದರ ವಿವರವನ್ನು ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ಆಯೋಗವು ಸೂಕ್ತ ಕ್ರಮ ಜರುಗಿಸಲಿದೆ ಎಂದು ಸೂಚಿಸಿದೆ.
ನೋಟಿಸ್ಗೆ ಕೇಜ್ರಿವಾಲ್ ಉತ್ತರವೇನಿತ್ತು?: ಚುನಾವಣಾ ಆಯೋಗ ತಿಳಿಸಿದಂತೆ, ಅರವಿಂದ್ ಕೇಜ್ರಿವಾಲ್ ಅವರು ಹರಿಯಾಣ ಸರ್ಕಾರ ಯಮುನಾ ನದಿಯಲ್ಲಿ ವಿಷ ಬೆರೆಸುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಇತ್ತೀಚಿನ ದಿನಗಳಲ್ಲಿ ಹರಿಯಾಣದಿಂದ ಬರುವ ನೀರು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಅತ್ಯಂತ ಕಲುಷಿತ ಮತ್ತು ವಿಷಕಾರಿದೆ ಎಂದು ಉಲ್ಲೇಖಿಸಿದ್ದಾರೆ.
14 ಪುಟಗಳ ಉತ್ತರದಲ್ಲಿ, ದೆಹಲಿಯ ಮಾಜಿ ಸಿಎಂ ಇಂತಹ ವಿಷಕಾರಿ ನೀರನ್ನು ಜನರು ಸೇವಿಸಲು ಬಿಟ್ಟರೆ, ಅದು ಗಂಭೀರ ಆರೋಗ್ಯ ಅಪಾಯ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ತಾವು ಮಾಡಿದ ವಿಷ ಬೆರೆಸಿದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿಲ್ಲ ಎಂದು ಆಕ್ಷೇಪಿಸಿದೆ. ಹೀಗಾಗಿ, ವಿಷ ಹಾಕಿದ ವಿಧಾನ, ಸ್ಥಳ ಮತ್ತು ಅದರ ಪರೀಕ್ಷಾ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.