ರಾಮನ ಪಕ್ಕದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ಹನುಮಂತ ಪಾತ್ರಧಾರಿ: ಮನಕಲಕುವ ದೃಶ್ಯ - haryana
ಶ್ರೀರಾಮ ನವಮಿ ದಿನ ಏರ್ಪಡಿಸಿದ್ದ ನಾಟಕದಲ್ಲಿ ಹನುಮಂತನ ಪಾತ್ರಧಾರಿ ನೋಡುನೋಡುತ್ತಿದ್ದಂತೆಯೇ ವೇದಿಕೆಯಲ್ಲಿ ಕುಸಿದು ಮೃತಪಟ್ಟರು.


By PTI
Published : Jan 24, 2024, 9:58 AM IST
ಭಿವಾನಿ(ಹರಿಯಾಣ): ರಾಮಮಂದಿರ ಉದ್ಘಾಟನೆಯ ಸಂಭ್ರಮದ ದಿನದಂದು ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ರಾಮಲೀಲಾ ನಾಟಕ ಪ್ರದರ್ಶನ ನಡೆಯುತ್ತಿದ್ದಾಗ ಹನುಮಂತ ಪಾತ್ರಧಾರಿ ವೇದಿಕೆಯಲ್ಲಿ ಕುಸಿದು ಹೃದಯಾಘಾತದಿಂದ ಕೊನೆಯುಸಿರೆಳೆದರು.
ಘಟನೆಯ ಸಂಪೂರ್ಣ ವಿವರ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನ ಭಿವಾನಿ ನಗರದಲ್ಲಿ ರಾಮಲೀಲಾ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ಹನುಮಂತನ ಪಾತ್ರ ಮಾಡುತ್ತಿದ್ದ ಹರೀಶ್ ಮೆಹ್ತಾ ಹೃದಯಾಘಾತದಿಂದ ಕುಸಿದು ಶ್ರೀರಾಮನ ಪಾತ್ರಧಾರಿ ಕಲಾವಿದನ ಪಾದಗಳಿಗೆರಗಿ ಸಾವನ್ನಪ್ಪಿದರು. ಆದರೆ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಮೆಹ್ತಾ ಪಾತ್ರ ಮಾಡುತ್ತಿದ್ದಾರೆ ಎಂದೇ ಭಾವಿಸಿದ್ದರು. ಹೀಗಾಗಿ, ವಾಸ್ತವ ವಿಷಯ ತಿಳಿಯದೇ ಚಪ್ಪಾಳೆ ತಟ್ಟುತ್ತಿದ್ದರು.
ಬಹಳ ಸಮಯವಾದರೂ ಹರೀಶ್ ಮೆಹ್ತಾ ಮೇಲೇಳದೇ ಇದ್ದಾಗ ಅಲ್ಲಿದ್ದವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ, ಎಚ್ಚರಗೊಳ್ಳಲೇ ಇಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮೆಹ್ತಾ ಸಾವನ್ನಪ್ಪಿರುವುದಾಗಿ ತಿಳಿಸಿದರು. ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಸಹಕಲಾವಿದರು ರಾಮಲೀಲಾ ನಾಟಕ ಪ್ರದರ್ಶಿಸುವ ಮೂಲಕ ಹಿರಿಯ ಕಲಾವಿದನ ನಿಧನಕ್ಕೆ ಸಂತಾಪ ಸೂಚಿಸಿದರು.
25 ವರ್ಷಗಳಿಂದ ಹನುಮಂತನ ಪಾತ್ರ: ಹರೀಶ್ ಮೆಹ್ತಾ ಕಳೆದ 25 ವರ್ಷಗಳಿಂದ ಹನುಮಂತನ ಪಾತ್ರ ಮಾಡುತ್ತಿದ್ದರಂತೆ. ಇವರು ವಿದ್ಯುತ್ ಇಲಾಖೆಯಲ್ಲಿ ಜೆಇ ಹುದ್ದೆಯಿಂದ ನಿವೃತ್ತರಾಗಿದ್ದರು.
ಇದನ್ನೂ ಓದಿ: ದೇಶದ ಗಡಿಯಲ್ಲಿ ಮೊಳಗಿದ ಜೈಶ್ರೀರಾಮ್ ಘೋಷಣೆ: ಚೀನೀ ಸೈನಿಕರಿಂದ ರಾಮಜಪ!