ನವದೆಹಲಿ: ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸಿದೆ ಎಂದು ಕಾಂಗ್ರೆಸ್ ಮುಖಂಡ ವಿವೇಕ್ ತಂಖಾ ಶುಕ್ರವಾರ ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಪಕ್ಷದ ಮುಖ್ಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಈ ಕ್ರಮ ಪಕ್ಷದ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಈ ಮುಂಚೆ ಹೇಳಿತ್ತು. ಅದಾಗಿ ಕೇವಲ ಒಂದು ಗಂಟೆಯ ನಂತರ ಖಾತೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ವಿವೇಕ್ ತಂಖಾ ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಆದೇಶದ ವಿರುದ್ಧ ನ್ಯಾಯಮಂಡಳಿಯ ಮುಂದೆ ಹಾಜರಾಗಿದ್ದ ಕಾಂಗ್ರೆಸ್ ಮುಖಂಡ ವಿವೇಕ್ ತಂಖಾ, ಪಕ್ಷಕ್ಕೆ ಈಗ ತನ್ನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ನ್ಯಾಯಮಂಡಳಿ ಮುಂದಿನ ಬುಧವಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸಲಿದೆ.
ಪ್ರಮುಖ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿದರೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷಕ್ಕೆ ಸಾಧ್ಯವಾಗಲಾರದು ಎಂಬ ವಿಷಯವನ್ನು ನ್ಯಾಯಮಂಡಳಿಗೆ ತಿಳಿಸಿರುವುದಾಗಿ ತಂಖಾ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಖಜಾಂಚಿ ಅಜಯ್ ಮಾಕೆನ್, ಆದಾಯ ತೆರಿಗೆ ಇಲಾಖೆ ಕ್ಷುಲ್ಲಕ ಕಾರಣಗಳಿಗಾಗಿ ಕಾಂಗ್ರೆಸ್ನ ಮುಖ್ಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲು ಕೇವಲ ಎರಡು ವಾರಗಳಿರುವಾಗ ಖಾತೆ ಸ್ಥಗಿತಗೊಳಿಸಿರುವುದು ಪಕ್ಷದ ಎಲ್ಲಾ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
2018-19ನೇ ಸಾಲಿನ 210 ಕೋಟಿ ರೂ.ಗಳ ಆದಾಯ ತೆರಿಗೆ ಪಾವತಿಸುವಂತೆ ಸೂಚಿಸಿ ಭಾರತೀಯ ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಕೆನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಕ್ಷವು ಸಂಬಂಧಿತ ವರ್ಷದ ಆದಾಯ ತೆರಿಗೆ ರಿಟರ್ನ್ ಅನ್ನು ಕೆಲ ದಿನ ತಡವಾಗಿ ಸಲ್ಲಿಸಿದೆ ಮತ್ತು ಅದಕ್ಕಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ, ಖಾತೆ ಸ್ಥಗಿತಗೊಳಿಸುವ ಬಗ್ಗೆ ಬುಧವಾರ ಐಟಿ ಅಧಿಕಾರಿಗಳ ಆದೇಶ ಬಂದಿವೆ ಎಂದು ಅವರು ಹೇಳಿದರು.
ಈ ವಿಷಯವು ಪ್ರಸ್ತುತ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಂದಿದ್ದು, ಸ್ಥಗಿತಕ್ಕೆ ಪ್ರತಿಕ್ರಿಯೆಯಾಗಿ ಪಕ್ಷವು ಕಾನೂನು ಕ್ರಮ ಕೈಗೊಂಡಿದೆ ಎಂದು ಮಾಕೆನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಕರಣದ ವಿಚಾರಣೆ ಬಾಕಿ ಇದ್ದ ಕಾರಣದಿಂದ ಈ ವಿಷಯವನ್ನು ಮೊದಲೇ ಬಹಿರಂಗಪಡಿಸಿರಲಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದರು.
ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿತ್ತು. ನಂತರ ಒಂಬತ್ತು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿತು. ಪಕ್ಷವು ಕ್ರೌಡ್ ಫಂಡಿಂಗ್ ಮೂಲಕ ಪಡೆದ ಹಣವನ್ನು ಸಹ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಮಾಕೆನ್, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಕರ್ನಾಟಕಕ್ಕೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹235 ಕೋಟಿ ಬಿಡುಗಡೆ: ಶೋಭಾ ಕರಂದ್ಲಾಜೆ