ಪಾಟ್ನಾ: ಮುಂದಿನ ಶೈಕ್ಷಣಿಕ ವರ್ಷದಿಂದ ಬಿಹಾರದಲ್ಲಿ ಹಿಂದಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ತಿಳಿಸಿದ್ದಾರೆ. ಈ ಮೊದಲು ಮಧ್ಯ ಪ್ರದೇಶದಲ್ಲಿ ಎಂಬಿಬಿಎಸ್ ಅನ್ನು ಹಿಂದಿಯಲ್ಲಿ ಕಲಿಯುವ ಅವಕಾಶ ನೀಡಲಾಗಿತ್ತು. ಇದೀಗ ಬಿಹಾರ ಕೂಡ ಇದೇ ಹಾದಿಯಲ್ಲಿ ಸಾಗಿದೆ.
ಏಮ್ಸ್ ನವದೆಹಲಿ ಶಿಫಾರಸು ಮಾಡಿದ ವೈದ್ಯಕೀಯ ಶಿಕ್ಷಣದ ಪಠ್ಯವನ್ನು ಹಿಂದಿಯಲ್ಲಿ ಅಳವಡಿಸಲಾಗುವುದು. ಇದರಿಂದ ಇಂಗ್ಲಿಷ್ ಬದಲಾಗಿ ಪಠ್ಯವನ್ನು ಹಿಂದಿಯಲ್ಲಿ ಸುಲಭವಾಗಿ ಕಲಿಯಬಹುದಾಗಿದೆ. 2024ರ ನೀಟ್ ಯುಜಿ ಪರೀಕ್ಷೆ ಪಾಸ್ ಮಾಡಿರುವ ವಿದ್ಯಾರ್ಥಿಗಳು ಹಿಂದಿಯಲ್ಲಿ ಎಂಬಿಬಿಎಸ್ ಕಲಿಯುವ ಅವಕಾಶ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಎಂಬಿಬಿಎಸ್ ಕೋರ್ಸ್‌ಗೆ ಹಿಂದಿ ಪಠ್ಯಪುಸ್ತಕಗಳ ಲಭ್ಯತೆ ಸೇರಿದಂತೆ ಅಗತ್ಯ ಅಂಶಗಳ ಕುರಿತು ಚರ್ಚಿಸಿದ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದ ಮೂಲಕ ಹಿಂದಿಯನ್ನು ಉತ್ತೇಜಿಸುವ ಹಾಗೂ ಜಾಗತಿಕ ಭಾಷೆಯಾಗಿ ಮಾಡುವ ಸರ್ಕಾರದ ಗುರಿ ಈಡೇರುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಎಂಬಿಬಿಎಸ್ ಅನ್ನು ಹಿಂದಿ ಭಾಷೆಯಲ್ಲಿ ಪರಿಚಯಿಸಲು 9 ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಸದಸ್ಯರ ಶಿಫಾರಸಿನನ್ವಯ ಏಮ್ಸ್ ದೆಹಲಿ ಪಠ್ಯವನ್ನು ಹಿಂದಿ ಭಾಷೆಯಲ್ಲಿ ಅಳವಡಿಸಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಯುಪಿಎಸ್ಸಿ ಪ್ರಯತ್ನಿಸುವುದು ಆಕಾಂಕ್ಷೆಯ ಬಡತನವಲ್ಲ, ಅದು ಆಕಾಂಕ್ಷೆಯ ಉದಾತ್ತತೆ: ಪ್ರೊ. ಮಿಲಿಂದ್ ಕುಮಾರ್ ಶರ್ಮಾ