ಮಣಿಪುರದ ಥೌಬಾಂಗ್ನಿಂದ ಕಾಂಗ್ರೆಸ್ 'ಭಾರತ್ ಜೋಡೋ ನ್ಯಾಯ ಯಾತ್ರೆ' ಆರಂಭ: ವಿಡಿಯೋ - ರಾಹುಲ್ ಯಾತ್ರೆ ಆರಂಭ
🎬 Watch Now: Feature Video
Published : Jan 14, 2024, 6:04 PM IST
|Updated : Jan 14, 2024, 8:18 PM IST
ಥೌಬಾಂಗ್(ಮಣಿಪುರ): ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ 'ಭಾರತ್ ಜೋಡೋ ನ್ಯಾಯ ಯಾತ್ರೆ'ಯು ಮಣಿಪುರದಿಂದ ಭಾನುವಾರ ಆರಂಭವಾಯಿತು. ಇಲ್ಲಿನ ಥೌಬಾಂಗ್ನ ಮೈದಾನದಿಂದ ಮಧ್ಯಾಹ್ನ ಯಾತ್ರೆಯು ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಘೋಷಣೆಗಳ ನಡುವೆ ಚಾಲನೆ ಪಡೆಯಿತು.
ದೊಡ್ಡ ಬಸ್ನಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಜನರತ್ತ ಕೈ ಬೀಸಿದರು. ಯಾತ್ರೆಯಲ್ಲಿದ್ದ ಜನರು ಭಾರತ್ ಜೋಡೋ, ನಫರತ್ (ದ್ವೇಷ) ಚೋಡೋ ಎಂಬ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ, ಆರ್ಎಸ್ಎಸ್, ಪ್ರಧಾನಿ ಮೋದಿ ಅವರನ್ನು ಟೀಕಿಸಿದರು. ಮಣಿಪುರ ಭಾರತದ ಭಾಗವಲ್ಲ ಎಂಬುದು ಇವರ ಚಿಂತನೆ, ದ್ವೇಷವನ್ನು ಬಿತ್ತುವುದೇ ಇವರ ಕೆಲಸ. ನಾವು ನಮ್ಮ ಮನದಾಳದ ಮಾತನ್ನು ಹೇಳುವವರಲ್ಲ, ಜನರ ಮನದಾಳದ ಮಾತನ್ನು ಕೇಳುವವರು ಎಂದು ಹೇಳಿದರು. ಇಲ್ಲಿ ನಡೆದ ಘರ್ಷಣೆಯಲ್ಲಿ ಹಲವು ಕುಟುಂಬಗಳು ಪ್ರಾಣ ಕಳೆದುಕೊಂಡಿವೆ. ಅದರ ಪರಿವೇ ಬಿಜೆಪಿ, ಪ್ರಧಾನಿ ಮೋದಿ ಅವರಿಗೆ ಇಲ್ಲವಾಗಿದೆ ಎಂದು ಟೀಕಿಸಿದರು.
'ಮುಖ್ ಮೇ ರಾಮ್, ಬಗಲ್ ಮೇ ಚೂರಿ': ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಅವರು ಚುನಾವಣಾ ಲಾಭಕ್ಕಾಗಿ ಧರ್ಮವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಸಮುದ್ರ ದಡದಲ್ಲಿ ಆನಂದಿಸುತ್ತ, ಅಲ್ಲಿ ಕುಳಿತು ರಾಮ್ ರಾಮ್ ಎಂದು ಜಪಿಸುತ್ತಿದ್ದಾರೆ. ಅವರದ್ದು 'ಮುಖ್ ಮೇ ರಾಮ್, ಬಗಲ್ ಮೇ ಚೂರಿ' (ಮುಖದಲ್ಲಿ ರಾಮ, ಬಗಲಲ್ಲಿ ಚೂರಿ), ಜನರೊಂದಿಗೆ ಹೀಗೆ ಮಾಡಬೇಡಿ ಎಂದು ಹಿಂದಿಯಲ್ಲಿ ಉಲ್ಲೇಖಿಸಿ ಖರ್ಗೆ ವಾಗ್ದಾಳಿ ನಡೆಸಿದರು.
ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರ ಉಲ್ಲೇಖಿಸಿ ಮಾತನಾಡಿದ ಖರ್ಗೆ, ಮೋದಿ ಮಣಿಪುರಕ್ಕೆ ಮತಕ್ಕಾಗಿ ಬರುತ್ತಾರೆ, ಆದರೆ ಜನರು ಕಷ್ಟದಲ್ಲಿದ್ದಾಗ ಭೇಟಿ ನೀಡಲಿಲ್ಲ ಎಂದು ಆರೋಪಿಸಿದರು. ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದಲ್ಲದೆ, 180ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡರು. ಮತಕ್ಕಾಗಿ ಢೋಂಗಬಾಜಿ (ವಂಚನೆ) ಮಾಡಬಾರದು ಎಂದು ಹರಿಹಾಯ್ದರು.
ಯಾತ್ರೆಯು ಒಟ್ಟು 67 ದಿನಗಳು ನಡೆಯಲಿದೆ. ಸುಮಾರು 6,700 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. 110 ಜಿಲ್ಲೆಗಳನ್ನು ಹಾದು ಹೋಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ ಯಾತ್ರೆ: ಮಣಿಪುರಕ್ಕೆ ತೆರಳಿದ ಕಾಂಗ್ರೆಸ್ ನಾಯಕರು-ವಿಡಿಯೋ