ಬೆಂಗಳೂರು: ಸುಮಾರು 23 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆಯ ದಣನಾಯಕನಕೆರೆಯ ಸಾಕಮ್ಮ ಎಂಬವರು ಮರಳಿ ಕುಟುಂಬ ಸೇರಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣ ಎನ್ನುವುದು ವಿಶೇಷ.
ಕಾಣೆಯಾಗಿದ್ದ 50 ವರ್ಷದ ಸಾಕಮ್ಮ ಹಲವು ವರ್ಷಗಳ ನಂತರ ಆಕೆಯ ಕುಟುಂಬವನ್ನು ಸುರಕ್ಷಿತವಾಗಿ ಸೇರಿದ್ದಾರೆ. ಈ ಘಟನೆ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಸಿನಿಮಾವನ್ನು ನೆನಪಿಸುವಂತಿದೆ.
ಮಹಿಳೆ ಇಪ್ಪತ್ಮೂರು ವರ್ಷಗಳ ಹಿಂದೆ ತನ್ನ ಕುಟುಂಬ ತೊರೆದು ಕಾಣೆಯಾಗಿದ್ದರು. ನಂತರ ಸುಮಾರು ಎರಡು ವರ್ಷಗಳ ಹಿಂದೆ ತಿಳಿಯದೇ ಕರ್ನಾಟಕದಿಂದ ರೈಲಿನ ಮೂಲಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ತಲುಪಿದ್ದರು. ಕುಟುಂಬದವನ್ನು ಸೇರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂಬ ವಿಚಾರವನ್ನು ಕರ್ನಾಟಕ ಮೂಲದ ಉತ್ತರಾಖಂಡದ ಐಪಿಎಸ್ ಅಧಿಕಾರಿ ರವಿನಂದನ್ ಅವರ ಮೂಲಕ ಮಾಹಿತಿ ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಜಿ. ಎಂಬವರು ಈ ವಿಷಯವನ್ನು 2024ರ ಡಿಸೆಂಬರ್ 19ರಂದು 'ಎಕ್ಸ್' ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ಸಹಾಯ ಕೋರಿದ್ದರು.
ಅದರಂತೆ, ಪ್ರಧಾನ ಕಾರ್ಯದರ್ಶಿ ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಟ್ಯಾಗ್ ಮಾಡಿ ಮಹಿಳೆಯನ್ನು ಮರಳಿ ಕರ್ನಾಟಕಕ್ಕೆ ಕರೆತರುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರು.
ಸಾಕಮ್ಮನವರ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಾಜ್ಯಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ, ಅಧಿಕಾರಿಗಳ ತಂಡವನ್ನು ವಿಮಾನದ ಮೂಲಕ ಕಳುಹಿಸಿ ಅವರನ್ನು ವಿಮಾನದಲ್ಲೇ ಸುರಕ್ಷಿತವಾಗಿ ಕರೆತರುವಂತೆ ಆದೇಶಿಸಿದೆ ಎಂದು ತಿಳಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರಿಗೆ ಉತ್ತರಾಖಂಡದ ಐಪಿಎಸ್ ಅಧಿಕಾರಿ ರವಿನಂದನ್ ಅವರೊಂದಿಗೆ ಉತ್ತಮ ಓಡನಾಟ ಇದ್ದುದರಿಂದ ಅವರನ್ನು ಸಂಪರ್ಕಿಸಿ ಈ ವಿಚಾರವನ್ನು ಮುಂದಿನ ಕ್ರಮಕ್ಕಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಹಾಯವಾಣಿಗೆ ಅನುಕೂಲವಾಗುವಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಈ ಕುರಿತು ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ನಾಗೇಶ್, ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಾಗೂ ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರನ್ನು ಸಂರ್ಪಕಿಸಲಾಗಿತ್ತು. ಎರಡು ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರೊಂದಿಗೆ ಸಮನ್ವಯ ಸಾಧಿಸಿ, ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಅವರ ನಿರ್ದೇಶನದಂತೆ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ, ಬಳ್ಳಾರಿ ಜಿಲ್ಲೆಯ ಎನ್.ಪಿ.ಕೆ ಕೇಂದ್ರದ ವಾರ್ಡನ್, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿಯವರು ಕಾರ್ಯಾಚರಣೆ ತಂಡದಲ್ಲಿ ಇದ್ದರು. ಈ ತಂಡವು 2024ರ ಡಿಸೆಂಬರ್ 21ರಂದು ಚಂಡೀಗಢವನ್ನು ತಲುಪಿ, ನಂತರ ಸಾಕಮ್ಮ ಅವರಿದ್ದ ಹಿಮಾಚಲ ಪ್ರದೇಶದ ಮಂಡಿ ಜಲ್ಲೆಯ ಬಾಲ್ವಲಿ ಕಲ್ಯಾಣ ಸಭಾ (ವೃದ್ದಾಶ್ರಮ) ತಲುಪಿದ್ದರು.
ಈ ವೇಳೆ ಸಾಕಮ್ಮ ಅವರ ಆರೋಗ್ಯವನ್ನು ವಿಚಾರಿಸಿದ ಅಧಿಕಾರಿಗಳು, ವಿಡಿಯೋ ಕರೆ ಮೂಲಕ ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಆಕೆಗೆ 3 ಮಕ್ಕಳಿದ್ದು, ಅವರು ತಮ್ಮ ತಾಯಿಯನ್ನು ಸ್ವೀಕರಿಸಲು ಕಾಯುತ್ತಿದ್ದಾರೆಂದು ಅಧಿಕಾರಿಗಳು ಖಚಿತಪಡಿಸಿಕೊಂಡು ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಮರುದಿನ ಸಾಕಮ್ಮ ಅವರನ್ನು ನಮ್ಮ ಅಧಿಕಾರಿಗಳಿಗೆ ಬಾಲ್ ಕಣಿವೆ ಮ್ಯಾಜಿಸ್ಟ್ರೇಟ್ ಉಪವಿಭಾಗದ ಸ್ಮೃತಿಕಾ ನೇಗಿ ಹಾಗೂ ಧರಮ್ ಶೀಲಾ ಅವರು ಮಹಿಳೆಯ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು.
ಸಾಕಮ್ಮನವರು 2024ರ ಡಿಸೆಂಬರ್ 24ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯ ತಂಡದೊಂದಿಗೆ ಚಂಡೀಗಢ ವಿಮಾನ ನಿಲ್ದಾಣವನ್ನು ತಲುಪಿದ್ದು, ನಂತರ ರಾತ್ರಿ 8.30ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ತಲುಪಿದ್ದಾರೆ. ಇಂದು ಸಾಕಮ್ಮ ಅವರನ್ನು ಅವರ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಅಧಿಕೃತ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವರು, ಕಾಣೆಯಾಗಿದ್ದ ಮಹಿಳೆ ಹಾಗೂ ಇತರರನ್ನು ಅಭಿನಂದಿಸಿ, ಸಾಕಮ್ಮ ಅವರನ್ನು ಅವರ ಕುಟುಂಬದವರ ವಶಕ್ಕೆ ಹಸ್ತಾಂತರಿಸಿದರು. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್.ಪಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ವಿಜಯಕುಮಾರ ಜಿ., ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ ತಂಡದವರನ್ನು ಹಾಗೂ ಕಾಣೆಯಾಗಿದ್ದ ಮಹಿಳೆ ಸಾಕಮ್ಮ ಅವರನ್ನು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿನಂದಿಸಿದರು. ಇದೇ ವೇಳೆ, ಸಾಮಾಜಿಕ ಮಾಧ್ಯಮದ ಉತ್ತಮ ಬಳಕೆ ಶ್ಲಾಘನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಣದೀಪ್ ಡಿ. ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಿಳೆ ತನ್ನ ಸ್ವಂತ ಗ್ರಾಮ ಪೊತಲಕಟ್ಟಿಗೆ ಕಾಲಿಡುತ್ತಿದ್ದಂತೆ ಮಕ್ಕಳು, ಪೋಷಕರು, ಸಂಬಂಧಿಕರು, ಬಿಗಿದಪ್ಪಿ ಕಣ್ಣೀರಿಟ್ಟರು. ಅಧಿಕಾರಿಗಳ ಸಮನ್ವಯತೆಯಿಂದ ತಾಯಿ ಮತ್ತು ಮಕ್ಕಳನ್ನು ಒಂದು ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.