ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಎಳೆದೊಯ್ದ ಹುಲಿ.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
🎬 Watch Now: Feature Video
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹುಲಿಯೊಂದು ದಾಳಿ ಮಾಡಿ ಎಳೆದೊಯ್ದ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟಾ ಸಮೀಪದ ಪಾಲೇರಿ ಗ್ರಾಮದ ಕಾಫಿ ತೋಟದಲ್ಲಿ ಸಂಭವಿಸಿದೆ.
ಕೆ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಾಲಕ ಮತ್ತು ಪೋಷಕರು ತೆರಳಿದ್ದರು. ಈ ವೇಳೆ ಕಾಫಿ ತೋಟದ ಮನೆಯ ಮುಂದೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ದಾಳಿ ಮಾಡಿದ ನರ ಭಕ್ಷಕ ಹುಲಿ ಬಾಲಕನನ್ನು ಕೊಂದು ಹಾಕಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಈಗ ಬಾಲಕನನ್ನು ಬಲಿ ಪಡೆದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಹುಲಿ ದಾಳಿಗೆ 12 ವರ್ಷದ ಬಾಲಕ ಚೇತನ್ ಸಾವನ್ನಪ್ಪಿದ್ದಾನೆ. ಕೂಲಿ ಮಾಡಲು ಹುಣಸೂರು ಸಮೀಪದ ಪಂಚವಳ್ಳಿ ಗ್ರಾಮದಿಂದ ಬಂದಿದ್ದ ಕಾರ್ಮಿಕ ಕುಟುಂಬ ಮಗನನ್ನು ಕಳೆದುಕೊಂಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಬರಲಿಲ್ಲ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಪೋಷಕರು ಸ್ಥಳದಲ್ಲಿ ಬಾಲಕನ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ಓದಿ: ಮೃತಪಟ್ಟ ಹುಲಿ ಕೊರಳು, ಕಾಲಲ್ಲಿ ತಂತಿ: ವ್ಯಾಘ್ರನ ಕೊಂದರೇ ಹುಲಿ ಹಂತಕರು?