ಪಾಟ್ನಾ(ಬಿಹಾರ): ಮಹಿಳೆಯರಿಗೆ ಹೆರಿಗೆ ರಜೆ ನೀಡಲಾಗುತ್ತೆ. ಗಂಡಸರಿಗೆ ಇಂಥದ್ದೊಂದು ರಜೆ ಸಿಗಬಹುದೇ?. ಹೌದು ಎನ್ನುತ್ತೆ ಬಿಹಾರದ ಶಿಕ್ಷಣ ಇಲಾಖೆ. ಪುರುಷ ಶಿಕ್ಷಕನಿಗೆ ಹೆರಿಗೆ ರಜೆ ಮಂಜೂರು ಮಾಡಿದ್ದು, ಅದನ್ನು ತನ್ನ ವೆಬ್ಸೈಟ್ನಲ್ಲಿ ನಮೂದು ಕೂಡ ಮಾಡಿದೆ.
ಇದು ಅಚ್ಚರಿಯಾದರೂ ನಿಜ. ಮಹಿಳೆಯರಿಗೆ ಮಾತ್ರ ಇರುವ ಹೆರಿಗೆ ರಜೆಯನ್ನು ಬಿಹಾರ ಶಿಕ್ಷಣ ಇಲಾಖೆ ಪುರುಷರಿಗೂ ನೀಡಿ ಯಡವಟ್ಟು ಮಾಡಿಕೊಂಡಿದೆ. ಇದು ಪ್ರಮಾದವಶಾತ್ ನಡೆದಿದ್ದರೂ, ಅಧಿಕೃತ ಪೋರ್ಟಲ್‌ನಲ್ಲಿ ನಮೂದಿಸುವ ಮೂಲಕ ನಗೆಪಾಟಲಿಗೀಡಾಗಿದೆ.
ಪ್ರಕರಣದ ವಿವರ: ಹಾಜಿಪುರ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸ್ತಿ ಪ್ರೌಢಶಾಲೆಯ ಶಿಕ್ಷಕರಾಗಿರುವ ಜಿತೇಂದ್ರ ಕುಮಾರ್ ಸಿಂಗ್ ಅವರು ಹೆರಿಗೆ ರಜೆ ಪಡೆದವರು. ಶಿಕ್ಷಕರು ರಜೆ ಯಾವ ಕಾರಣಕ್ಕಾಗಿ ಪಡೆದಿದ್ದಾರೆ ಎಂಬುದನ್ನು ಶಿಕ್ಷಣ ಇಲಾಖೆಯು ತನ್ನ ಅಧಿಕೃತ ಪೋರ್ಟಲ್ ಇ-ಶಿಕ್ಷಾ ಕೋಶದಲ್ಲಿ ಉಲ್ಲೇಖಿಸಿದೆ. ಜಿತೇಂದ್ರ ಅವರ ಹೆಸರಿನ ಮುಂದೆ ಹೆರಿಗೆ ರಜೆ ಎಂದು ನೋಂದಾಯಿಸಲಾಗಿದೆ.
ಇಂಥದ್ದೊಂದು ನಗೆಪಾಟಲಿನ ಪ್ರಮಾದ ಹೊರಬಿದ್ದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರ ಹೆಸರನ್ನು ಇಲಾಖೆಯ ಪೋರ್ಟಲ್‌ನಲ್ಲಿ ತಪ್ಪಾಗಿ ಸೇರಿದೆ. ಅದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದಿದ್ದಾರೆ.
ತಾಂತ್ರಿಕ ದೋಷದಿಂದ ಈ ಪ್ರಮಾದ ಉಂಟಾಗಿದೆ. ಶಿಕ್ಷಕರ ರಜೆಯನ್ನು ಅವರು ಅರ್ಹರಲ್ಲದ ವರ್ಗದಲ್ಲಿ ನಮೂದಿಸಲಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಲಾಗುವುದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹೆರಿಗೆ ರಜೆ ನಿಯಮವೇನು?: ರಾಜ್ಯದಲ್ಲಿ ಯಾವುದೇ ಸರ್ಕಾರಿ ಮಹಿಳಾ ಸಿಬ್ಬಂದಿ 180 ದಿನಗಳ (6 ತಿಂಗಳ) ಹೆರಿಗೆ ಪಡೆಯಬಹುದು. ಪುರುಷ ಸಿಬ್ಬಂದಿಗೆ ಪಿತೃತ್ವ ರಜೆಯಾಗಿ 15 ದಿನ ಪಾವತಿಸಹಿತ ರಜೆ ನೀಡುವ ನಿಯಮವಿದೆ. ಇದು ಎರಡು ಮಕ್ಕಳ ಹೆರಿಗೆಗೆ ಮಾತ್ರ ಅನ್ವಯಿಸುತ್ತದೆ.
ಇದನ್ನೂ ಓದಿ: ಮಗುವಿಗಾಗಿ ಮೃತಪಟ್ಟ ಪತಿಯ ದೇಹದಿಂದ ವೀರ್ಯ ತೆಗೆಯಲು ಬೇಡಿಕೆ ಇಟ್ಟ ಪತ್ನಿ!