ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಟ್ರಂಪ್ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾನುವಾರ ತಿಳಿಸಿದೆ.
''ಟ್ರಂಪ್-ವಾನ್ಸ್ ಪದಗ್ರಹಣ ಸಮಿತಿಯ ಆಹ್ವಾನದ ಮೇರೆಗೆ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ 47ನೇ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ'' ಎಂದು ಸಚಿವಾಲಯ ಮಾಹಿತಿ ನೀಡಿದೆ.
On the invitation of the Trump-Vance Inaugural Committee, External Affairs Minister, Dr. S. Jaishankar will represent the Government of India at the Swearing-in Ceremony of the President-Elect Donald J. Trump as the 47th President of the United States of America.
— Randhir Jaiswal (@MEAIndia) January 12, 2025
Press Release :…
ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದರು.
''ಭಾರತದ ಬಗ್ಗೆ ಟ್ರಂಪ್ ಸಕಾರಾತ್ಮಕ ರಾಜಕೀಯ ದೃಷ್ಟಿಕೋನ ಹೊಂದಿದ್ದಾರೆ'' ಎಂದು ಜೈಶಂಕರ್ ಇತ್ತೀಚೆಗೆ ಹೇಳಿದ್ದರು.
ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿವಿಧ ಸುಂಕಗಳು, ಹವಾಮಾನ ಬದಲಾವಣೆ ಮತ್ತು ಒಟ್ಟಾರೆ ವಿದೇಶಾಂಗ ನೀತಿಗೆ ಆದ್ಯತೆ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳ ಕುರಿತು ಟ್ರಂಪ್ ಆಡಳಿತದ ನೀತಿಯ ಬಗ್ಗೆ ಹಲವು ದೇಶಗಳಲ್ಲಿ ಕಳವಳವಿದೆ.
ಟ್ರಂಪ್ ಅಮೆರಿಕ ಅಧ್ಯಕ್ಷರಾಗುತ್ತಿರುವುದು ಇದು ಎರಡನೇ ಬಾರಿ. ಜನವರಿ 2017ರಿಂದ ಜನವರಿ 2021ರವರೆಗೆ 45ನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಈ ಬಾರಿ ಜೆ.ಡಿ.ವ್ಯಾನ್ಸ್ ಯುಎಸ್ನ ನೂತನ ಉಪಾಧ್ಯಕ್ಷರಾಗಲಿದ್ದಾರೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಸುಟ್ಟು ಬೂದಿಯಾದ ಸ್ಥಳದಲ್ಲಿ ಮನೆಗಳ ಅಸ್ತಿತ್ವ ಹುಡುಕುತ್ತಿರುವ ಲಾಸ್ ಏಂಜಲೀಸ್ ಜನರು