ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಹೂಗ್ಯಂ ವಲಯದ ಅರಣ್ಯ ಪ್ರದೇಶದಲ್ಲಿ ಶನಿವಾರ ಹೆಣ್ಣಾನೆಯೊಂದು ಮೃತಪಟ್ಟಿದೆ.
ಹೂಗ್ಯಂ ವಲಯದ ಸೂಳೆಕೋಬೆ ಗಸ್ತಿನಲ್ಲಿ ಆನೆ ಮೃತಪಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎಸಿಎಫ್ ಶಿವರಾಮು, ವಲಯ ಅರಣ್ಯಾಧಿಕಾರಿ ಪುಟ್ಟರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಿರುವ ಆನೆಗೆ ಸುಮಾರು 40 ವರ್ಷ ವಯಸ್ಸಾಗಿದ್ದು, ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಆನೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಕಾಡೆಮ್ಮೆ ಸಾವು: ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಅರಣ್ಯದಲ್ಲಿ, ಚಿರತೆಯೊಂದು ಕಾಡೆಮ್ಮೆಯ ಮೇಲೆ ದಾಳಿ ನಡೆಸಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಕಂದಕಕ್ಕೆ ಬಿದ್ದು ಅಸುನೀಗಿದೆ. ವಲಯ ಅರಣ್ಯ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಕದಲ್ಲಿದ್ದ ಕಾಡೆಮ್ಮೆಯ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ: ಬಂಡೀಪುರ: ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಜಿಂಕೆ ಸಾವು, ಚಾಲಕ ಅರೆಸ್ಟ್