ಕಲಬುರಗಿ: ಶಾಲಾ ಬಸ್ಗೆ ಮಗನನ್ನು ಹತ್ತಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮೋಹನ್ ಲಾಡ್ಜ್ ಮುಂಭಾಗದ ಮುಖ್ಯರಸ್ತೆಯಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾಗ್ಯಶ್ರೀ ಎಂಬವರು ತಮ್ಮ ಮಗನನ್ನು ಶಾಲಾ ಬಸ್ ಹತ್ತಿಸುತ್ತಿದ್ದಾಗ ಮೇಲಿಂದ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲ್ಭಾಗಕ್ಕೆ ತಗುಲಿ ಬಸ್ಗೆ ಕರೆಂಟ್ ಪಸರಿಸಿದೆ. ಮೊದಲು ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದಿದೆ. ನಂತರ ಮಗನ ಕೈ ಹಿಡಿದಿದ್ದ ತಾಯಿಗೂ ಶಾಕ್ ಹೊಡೆದಿದೆ. ಇದರಿಂದಾಗಿ ಮಹಿಳೆ ರಸ್ತೆಯಲ್ಲಿ ಬಿದ್ದು ನರಳಾಡಿದ್ದಾರೆ. ಅವರ ಕೈ, ಕಾಲು, ಹೊಟ್ಟೆಯ ಭಾಗ ಸುಟ್ಟಿದೆ. ಕೂಡಲೇ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಇದೀಗ ಭಾಗ್ಯಶ್ರೀ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗ ಆಯುಷ್ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್, ಬಸ್ನಲ್ಲಿದ್ದ 11 ಬುದ್ದಿಮಾಂದ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಜೆಸ್ಕಾಂ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಅಲ್ಲಮಪ್ರಭು ಪಾಟೀಲ್ ಪ್ರತಿಕ್ರಿಯಿಸಿ, "ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಪರಿಹಾರ ಒದಗಿಸುವ ಬಗ್ಗೆ ಸಂಬಂಧಿಸಿದ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಯೊಂದಿಗೆ ಮಾತನಾಡಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಟ್ರಾನ್ಸ್ಫಾರ್ಮರ್ ಗೈ ವೈರ್ ಎಳೆದು ಚಿಂದಿ ಆಯುವ ಬಾಲಕ ಸಾವು: ಬೆಸ್ಕಾಂ ಸ್ಪಷ್ಟನೆ - transformer guy wire