ಮೈಸೂರು: "ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಅವರಿಂದ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಹೇಳಿದ್ದೇವೆ ಇದೊಂದು ಗಂಭೀರವಾದ ಪ್ರಕರಣ. ಈ ಪ್ರಕರಣದಲ್ಲಿ ಪತ್ನಿಯ ಹೆಸರಿರುವ ಕಾರಣದಿಂದ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ನಮ್ಮ ಪಕ್ಷ ಈಗಾಗಲೇ ಆಗ್ರಹಿಸಿದೆ. ಆ ನಿಲುವಿನಲ್ಲಿ ಬದಲಾವಣೆ ಇಲ್ಲ, ಸಿಎಂ ಸಿದ್ದರಾಮಯ್ಯನವರು ಈಗಾಲಾದರೂ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದರು.
ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ಗೆ ಇ.ಡಿ. ನೋಟಿಸ್ ನೀಡಿರುವ ಬಗ್ಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರ ಕುರಿತು ಪ್ರತಿಕ್ರಿಯಿಸಿ, "ಇದು ಬಹಳ ಗಂಭೀರವಾದ ಪ್ರಕರಣ. ಬ್ಯಾಂಕ್ಗಳು ಸ್ನೇಹಮಯಿಯಾಗಿ ಕೆಲಸ ಮಾಡಬೇಕು. ಕಿರುಕುಳ ಕೊಡಬಾರದು. ಈಗ ಆಗಿರುವ ಘಟನೆ ನಿಜಕ್ಕೂ ಖಂಡನೀಯ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಸರ್ಕಾರ ಟಿಡಿಆರ್ ಕೊಡುತ್ತಿಲ್ಲ: ಬೆಂಗಳೂರು ಆರಮನೆ ಆಸ್ತಿ ವಿಚಾರ ಸಂಬಂಧ ಸುಗ್ರೀವಾಜ್ಞೆಗೆ ಮುಂದಾಗಿರುವ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿ, "ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಅನುಸಾರ ನಡೆದುಕೊಳ್ಳಲಿ, ಸಾಮಾಜಿಕ ನ್ಯಾಯದ ವಿಚಾರ ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ. ನಮಗೆ ಟಿಡಿಆರ್ ಸರ್ಟಿಫಿಕೇಟ್ ಕೊಟ್ಟರೆ ಸಾಕು. ಪರಿಹಾರದ ಬದಲಿಗೆ ಕೊಡುವ ಟಿಡಿಆರ್ ಕೊಟ್ಟರೆ ಸಾಕು. ಆದರೆ, ಸರ್ಕಾರ ಟಿಡಿಆರ್ ಕೊಡುತ್ತಿಲ್ಲ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ" ಎಂದರು.
ಈ ಬಗ್ಗೆ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ಅವರ ಕೈಯಲ್ಲಿದೆ. ಹೀಗಾಗಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಇದ್ದಾಗ ನಮ್ಮ ಮುಂದೆ ಯಾಕೆ ಬರುತ್ತಾರೆ. ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ, ಇವರಿಗೆ ನಮ್ಮ ಆಸ್ತಿನೇ ಬೇಕಾ? ಎಂದು ಪ್ರಶ್ನಿಸಿದರು.
ನಾವು ಈಗಾಗಲೇ ಸಾಮಾಜಿಕನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ. ಸಾಮಾನ್ಯರಿಗೆ ಏನು ಕಾನೂನು ಇದೆಯೋ ಅದೇ ಕಾನೂನು ನಮಗೂ ಅನ್ವಯಿಸುತ್ತದೆ. ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸುಪ್ರೀಂಕೋರ್ಟ್ ನೀಡಿರುವ ಆದೇಶ ಇದೆ, ರಾಜ್ಯ ಸರ್ಕಾರ ಟಿಡಿಆರ್ ಕೊಡುವ ಮೂಲಕ, ರಾಜ್ಯ ಸರ್ಕಾರದಿಂದ ಒಂದು ಸರ್ಟಿಫಿಕೇಟ್ ಕೊಡಬೇಕೇ ಹೊರತು ಒಂದು ಪೈಸೆ ಕೊಡಬೇಕಾಗಿಲ್ಲ ಎಂದರು.
ಇದನ್ನೂ ಓದಿ: ಇ.ಡಿ ನೋಟಿಸ್ನಿಂದ ಸಿಎಂ ಸಿದ್ದರಾಮಯ್ಯನವರಿಗೆ ದೊಡ್ಡ ಆಘಾತವಾಗಿದೆ: ಬಿ.ವೈ. ವಿಜಯೇಂದ್ರ
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತಾರೆ ಎಂಬ ಪ್ರಧಾನಿ ಮೋದಿ ಮಾತು ಸತ್ಯವಾಗಿದೆ: ಆರ್.ಅಶೋಕ್