ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ನಿವೇಶನಗಳ ಅಕ್ರಮವಾಗಿ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಇ.ಡಿ ಜಾರಿ ಮಾಡಿದ್ದ ಸಮನ್ಸ್‌ಗೆ ಮಧ್ಯಂತರ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದು, ಪ್ರಕರಣದ ತನಿಖಾ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸದಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಈ ನಡುವೆ ಇದೇ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡುವ ಅಗತ್ಯವೇನಿದೆ. ಅಷ್ಟೊಂದು ಆತುರ ಏಕೆ? ಎಂದು ಇ.ಡಿ ಪರವಾಗಿ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ಅಲ್ಲದೇ, ಸಮನ್ಸ್‌ಗೆ ಜಾರಿ ಮಾಡಿ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡಲಾಗದು ಎಂದು ತಿಳಿಸಿ ಸಮನ್ಸ್‌ಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿತು.
ಬೈರತಿ ಸುರೇಶ ಪರ ವಕೀಲರು ಹೇಳಿದ್ದೇನು?: ವಿಚಾರಣೆ ವೇಳೆ ಬೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ''ಮುಡಾ ಪ್ರಕರಣ ಸಂಬಂಧ ನಮ್ಮ ಕಕ್ಷಿದಾರರಿಗೆ ಇ.ಡಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ, ಪ್ರಕರಣಕ್ಕೂ ನಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸಮನ್ಸ್ ಜಾರಿ ಮಾಡಿರುವುರು ಕಾನೂನುಬಾಹಿರ'' ಎಂದು ಪೀಠಕ್ಕೆ ತಿಳಿಸಿದರು.
''ನಮ್ಮ ಕಕ್ಷಿದಾರರ ಮಗನ ಮದುವೆ ನಿಶ್ಚಯವಾಗಿದೆ. ಈ ನಡುವೆ ಸಮನ್ಸ್ ಜಾರಿಯಾಗಿದ್ದು, ತೀವ್ರ ತೊಂದರೆಯಾಗಲಿದೆ. ಜೊತೆಗೆ, ಮುಡಾದ ವ್ಯವಸ್ಥಾಪಕ ನಿರ್ದೇಶಕ ನಟೇಶ್ ಅವರಿಗೆ ನೀಡಿದ್ದ ನೋಟಿಸ್ ಅನ್ನು ಹೈಕೋರ್ಟ್‌ನ ಮತ್ತೊಂದು ಪೀಠ ರದ್ದುಗೊಳಿಸಿದೆ. ಆದ್ದರಿಂದ ಸಮನ್ಸ್ ರದ್ದು ಮಾಡಬೇಕು'' ಎಂದು ಕೋರಿದರು.
ಸಿದ್ದರಾಮಯ್ಯ ಪತ್ನಿ ಪರ ವಕೀಲರ ವಾದವೇನು?: ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ವಾದಿಸಿ ಹಿರಿಯ ವಕೀಲ ಸಂದೇಶ್ ಚೌಟ, ''ಮುಡಾದಿಂದ ಪಡೆದಿದ್ದ ಬದಲಿ ನಿವೇಶನಗಳನ್ನು ನಮ್ಮ ಕಕ್ಷಿದಾರರು ಹಿಂದಿರುಗಿಸಿದ್ದಾರೆ. ಈ ಸಂಬಂಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಕಾಯ್ದಿರಿಸಲಾಗಿದೆ. ಆದರೂ, ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು, ರದ್ದುಗೊಳಿಸಬೇಕು'' ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಇಡಿ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ''ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಕಾಯಿದೆ ಸೆಕ್ಷನ್ 50(2)ರ ಅಡಿ ಪ್ರಕರಣ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಲು ಯಾರಿಗೆ ಬೇಕಾದರೂ ಸಮನ್ಸ್ ಜಾರಿ ಮಾಡಬಹುದಾಗಿದೆ. ಆರೋಪಿಗಳಿಗೇ ಸಮನ್ಸ್ ಜಾರಿ ಮಾಡಬೇಕು ಎಂಬ ನಿಯಮವಿಲ್ಲ'' ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿಯ ವಿವರ: ಅರ್ಜಿದಾರರು ಹಿರಿಯ ನಾಗರೀಕರಾಗಿದ್ದು, ಮೈಸೂರಿನ ಕೆಸರೆ ಗ್ರಾಮದಲ್ಲಿ ಸರ್ವೇ ಸಂಖ್ಯೆ 464ರಲ್ಲಿ ತುಂಡು ಭೂಮಿಯೊಂದನ್ನು ನನ್ನ ಸಹೋದರ ಖರೀದಿಸಿದ್ದರು. ಬಳಿಕ ತನಗೆ 2010ರಲ್ಲಿ ಅರಿಶಿಣ - ಕುಂಕುಮ ನೀಡುವ ಸಲುವಾಗಿ ದಾನವಾಗಿ ನೀಡಿದ್ದರು. ಈ ಜಮೀನು ಸ್ವಾಧೀನವಾಗಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಮುಡಾ ಅಭಿವೃದ್ಧಿಪಡಿಸಿತ್ತು. ಇದಕ್ಕಾಗಿ ಪರಿಹಾರ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಬಳಿಕ ಜನವತಿ ಪ್ರದೇಶಗಳಲ್ಲಿ ಬದಲಿ ನಿವೇಶನವನ್ನು ಮಂಜೂರು ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದಾದ ನಂತರ 2024ರ ಅಕ್ಟೋಬರ್ ತಿಂಗಳಲ್ಲಿ ಆ ಬದಲಿ ನಿವೇಶನಗಳನ್ನು ಬಿಟ್ಟುಕೊಡಲಾಗಿದೆ. ಹೀಗಿದ್ದರೂ ತನಗೆ ಸಂಬಂಧವಿಲ್ಲದ ದೂರಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳಿಲ್ಲದಿದ್ದರೂ, ಹಣಕಾಸಿನ ದುರ್ಬಳಕೆ ಇಲ್ಲದಿದ್ದರೂ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಇದು ಕಾನೂನುಬಾಹಿರ ಹಾಗೂ ಆದಾರ ರಹಿತವಾಗಿದೆ. ಅರ್ಜಿದಾರರ ಮೂಲ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೆ, ತನ್ನ ಪತಿಯ (ಸಿಎಂ ಸಿದ್ದರಾಮಯ್ಯ) ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ಈ ರೀತಿಯ ದೂರುಗಳು ದಾಖಲಾಗುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಚಿವ ಬೈರತಿ ಸುರೇಶ್ ಅರ್ಜಿ: ಅಲ್ಲದೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ, ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಮನ್ಸ್ ಜಾರಿ ಮಾಡಲಾಗಿದೆ. ಆದ್ದರಿಂದ ಸಮನ್ಸ್ ರದ್ದು ಮಾಡಬೇಕು ಎಂದು ಸಚಿವ ಭೈರತಿ ಸುರೇಶ್ ಮನವಿ ಮಾಡಿದ್ದರು.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್‌ಗೆ ಇ.ಡಿ ನೋಟಿಸ್