ಚಿಕ್ಕಮಗಳೂರು: ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾಕಾರರು
🎬 Watch Now: Feature Video
ಚಿಕ್ಕಮಗಳೂರು : 2019ರಲ್ಲಿ ಉಂಟಾದ ಅತಿವೃಷ್ಟಿ, ಭೂ ಕುಸಿತ ಮತ್ತು ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬದವರು ತಮಗೆ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತರು, "ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಮಲೆಮನೆ ಗ್ರಾಮದಲ್ಲಿ ಮಳೆ ಮತ್ತು ಭೂಕುಸಿತದಿಂದ ಹತ್ತಾರು ಕುಟುಂಬಗಳು ತಮ್ಮ ಮನೆ ಮತ್ತು ಜಮೀನು ಕಳೆದುಕೊಂಡಿದ್ದು, ತಮಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಸತತ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದುವರೆಗೂ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಿಲ್ಲ" ಎಂದರು.
"ವಾಸದ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ಸರ್ಕಾರದ ವತಿಯಿಂದ ನೀಡಿದ್ದರು. ಈಗ ಬಾಡಿಗೆ ಹಣ ಸಹ ನೀಡುತ್ತಿಲ್ಲ. ನಾವು ಕಳೆದು ಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರವಾಗಲಿ, ಬದಲಿ ಭೂಮಿಯಾಗಲಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಂದಾಯ ಸಚಿವರು ಸೇರಿದಂತೆ ಎಲ್ಲರೂ ಕೇವಲ ಭರವಸೆ ನೀಡುತ್ತಿದ್ದಾರೆ. ಆದರೆ ಯಾವುದೇ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಾವು ಈಗ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗಿದ್ದೇವೆ" ಎಂದು ಹೇಳಿದರು.
ಪ್ರತಿಭಟನಾಕಾರರು ಸರ್ಕಾರ ನಮಗೆ ಸೂಕ್ತ ಪುನರ್ವಸತಿ ನೀಡುವವರೆಗೆ ತಾಲ್ಲೂಕು ಕಚೇರಿ ಆವರಣದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ಈ ನಡುವೆ ಪ್ರತಿಭಟನಾಕಾರರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. 4 ವರ್ಷಗಳಿಂದ ಸೂಕ್ತ ಪುನರ್ವಸತಿಗಾಗಿ ಅಲೆದಾಡುತ್ತಿರುವ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಆದ್ಯತೆಯ ಮೇಲೆ ಮುಂದಾಗಬೇಕಾಗಿದೆ. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಸರ್ಕಾರದ ಯೋಜನೆ ಪ್ರಚಾರ ವಾಹನ ಮರದ ಕೆಳಗೆ ಹಾಕಿ ನಿದ್ದೆ ಮಾಡುವ ಚಾಲಕ..!