ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಡಿಸೆಂಬರ್ 22ರಂದು ಹೈದರಾಬಾದ್ ಮೂಲದ ಉದ್ಯಮಿ ಸಾಯಿ ವೆಂಕಟ ದತ್ತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈ ಬಗ್ಗೆ 'ಈಟಿವಿ ಭಾರತ'ದೊಂದಿಗಿನ ವಿಶೇಷ ಸಂಭಾಷಣೆಯಲ್ಲಿ ಸಿಂಧು ತಮ್ಮ ಮದುವೆ, ವೃತ್ತಿ ಮತ್ತು ಭವಿಷ್ಯದ ಯೋಜನೆಗಳ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಕುಟುಂಬದಿಂದ ಆಶೀರ್ವಾದ ಪಡೆದ ವಿಶೇಷ ಕ್ಷಣ: "ನನ್ನ ಹೆತ್ತವರ ಆಶೀರ್ವಾದದೊಂದಿಗೆ ನನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ನನಗೆ ಬಹಳ ಸಂತಸವಾಗುತ್ತಿದೆ. ಕುಟುಂಬಸ್ಥರು ನನ್ನ ಬ್ಯಾಡ್ಮಿಂಟನ್ ಪ್ರಯಾಣಕ್ಕೆ ಬೆಂಬಲಿಸುತ್ತ ಶ್ರಮಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ಮದುವೆ ಆಗುವುದೆಂದು ನಾವು ಯೋಜಿಸಿದ್ದೆವು. ಆದರೆ, ನಿರಂತರ ವೇಳಾಪಟ್ಟಿಯಿಂದಾಗಿ ಸ್ವಲ್ಪ ತಡವಾಯಿತು'' ಎಂದು ಸಿಂಧು ಹೇಳಿಕೊಂಡಿದ್ದಾರೆ.
ವಿವಾಹವು ಉದಯಪುರದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಕುಟುಂಬದ ಆಪ್ತರು ಭಾಗವಹಿಸಲಿದ್ದಾರೆ. ಬಳಿಕ ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಭವ್ಯ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಆರತಕ್ಷತೆಯಲ್ಲಿ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ.
ನನ್ನ Passion ಹಂಚಿಕೊಳ್ಳುವ ಪಾಲುದಾರ: ಸಿಂಧು ಅವರ ಭಾವಿ ಪತಿ ಸಾಯಿ ವೆಂಕಟ ದತ್ತಾ ಅವರು ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಬ್ಯಾಡ್ಮಿಂಟನ್ ಆಡದಿದ್ದರೂ ಕೂಡ ಸಾಯಿ ಅವರು ಯಾವಾಗಲೂ ಕ್ರೀಡೆಯನ್ನು ಫಾಲೋ ಮಾಡುತ್ತಾರೆ. ತಾವಾಡುವ ಪಂದ್ಯಗಳನ್ನು ನೋಡುತ್ತ, ಆನಂದಿಸುತ್ತಾರೆ ಎಂದು ಸಿಂಧು ಹೇಳಿದರು.
"ವೆಂಕಟ್ ಯಾವಾಗಲೂ ನನಗೆ ಬೆಂಬಲ ನೀಡುತ್ತಿದ್ದಾರೆ. ಅವರು ತಮ್ಮ ಕಂಪನಿಯನ್ನು ನಿರ್ವಹಿಸುವಲ್ಲಿ ನಿರತರಾಗಿದ್ದರೂ, ಅವರು ಅತ್ಯಾಸಕ್ತಿಯ ಕ್ರೀಡಾ ಉತ್ಸಾಹಿ." ಎನ್ನುತ್ತಾರೆ ಸಿಂಧು. ಮೋಟಾರ್‌ಸ್ಪೋರ್ಟ್‌ಗಳಲ್ಲಿ ಸಾಯಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಅವರ ಬಳಿ ಸೂಪರ್‌ಬೈಕ್‌ಗಳು ಹಾಗೂ ಸ್ಪೋರ್ಟ್ಸ್ ಕಾರುಗಳ ಸಂಗ್ರಹವೂ ಇದೆ.
ಎಂದೆಂದಿಗೂ ಬ್ಯಾಡ್ಮಿಂಟನ್: ಮದುವೆ ಎಂದರೆ ನನ್ನ ಬ್ಯಾಡ್ಮಿಂಟನ್ ವೃತ್ತಿಜೀವನದ ಅಂತ್ಯವಲ್ಲ ಎಂದು ಇದೇ ವೇಳೆ ಸಿಂಧು ಸ್ಪಷ್ಟಪಡಿಸಿದ್ದಾರೆ. "ಫಿಟ್ ಆಗಿರುವುದು ಮತ್ತು ಆಟದಲ್ಲಿ ಮುಂದುವರೆಯುವುದು ನನ್ನ ಗುರಿ. ಮದುವೆಯ ನಂತರವೂ ನಾನು ನಿಯಮಿತವಾಗಿ ಅಭ್ಯಾಸ ಮಾಡುತ್ತೇನೆ. ಹೊಸ ಸೀಸನ್ ಜನವರಿಯಲ್ಲಿ ಪ್ರಾರಂಭವಾಗುತ್ತದೆ. ನಾನು ಎಲ್ಲಾ ಪ್ರಮುಖ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಲು ಸಂಪೂರ್ಣ ಗಮನಹರಿಸುತ್ತೇನೆ" ಎಂದವರು ಹೇಳಿದರು.
ಇತ್ತೀಚಿನ ಸೈಯದ್ ಮೋದಿ ಸೂಪರ್ 300 ಪ್ರಶಸ್ತಿ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡ ಅವರು, "ಈ ಗೆಲುವು ನಾನು ನನ್ನ ಲಯ ಮರಳಿ ಪಡೆಯಲು ನೆರವಾಯಿತು. ನಾನು ಫಿಟ್ ಆಗಿದ್ದರೆ ಮತ್ತು ಗಾಯಗಳಿಂದ ದೂರ ಉಳಿದರೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇನೆ." ಎಂದರು.
ಸಾಯಿ ಹಿನ್ನೆಲೆ ಮತ್ತು ಆಸಕ್ತಿಗಳು: ಸಾಯಿ ವೆಂಕಟ ದತ್ತಾ ಅವರು ಪ್ರತಿಷ್ಠಿತ ಕುಟುಂಬದಿಂದ ಬಂದವರು. ಅವರ ತಂದೆ ಗೌರೆಲ್ಲಿ ವೆಂಕಟೇಶ್ವರ ರಾವ್ ಅವರು ನಿವೃತ್ತ ಆದಾಯ ತೆರಿಗೆ ಅಧಿಕಾರಿ ಮತ್ತು ಪೋಸಿಡೆಕ್ಸ್ ಟೆಕ್ನಾಲಜೀಸ್ ಸಂಸ್ಥಾಪಕರು. ಸಾಯಿಯವರ ತಾಯಿ, ಲಕ್ಷ್ಮಿ, ಒಂದು ಪ್ರಮುಖ ವಂಶದಿಂದ ಬಂದವರು. ಲಕ್ಷ್ಮಿ ಅವರ ತಂದೆ ಭಾಸ್ಕರ ರಾವ್ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೋಟಾರು ಕ್ರೀಡೆಗಳ ಮೇಲೆ ಆಸಕ್ತಿ ಹೊಂದಿರುವ ಸಾಯಿ, ಡರ್ಟ್ ಬೈಕಿಂಗ್ ಮತ್ತು ಮೋಟಾರ್ ಟ್ರೆಕ್ಕಿಂಗ್‌ನಲ್ಲಿ ಭಾಗವಹಿಸುತ್ತಾರೆ. ತಮ್ಮ ವೃತ್ತಿ ಮತ್ತು ಸಾಹಸ ಚಟುವಟಿಕೆಗಳಲ್ಲಿ ಅವರು ಸಮಾನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರಂತೆ.
ಮುಂದಿನ ಗುರಿ: ಮದುವೆ ಮತ್ತು ಮುಂಬರುವ ಬ್ಯಾಡ್ಮಿಂಟನ್ ಸೀಸನ್‌ಗಾಗಿ ತಯಾರಿ ನಡೆಸುತ್ತಿರುವ ಸಿಂಧು, ತನ್ನ ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯಕ್ಕೆ ಹೊಂದಿಕೊಳ್ಳುವ ಜೊತೆಗೆ, ತನ್ನ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಬದ್ಧತೆ ಹೊಂದಿದ್ದಾರೆ. ಕೋರ್ಟ್‌ನಲ್ಲಿ ಮತ್ತು ಹೊರಗೆ ಅವರು ಮಿಂಚುವುದನ್ನು ಕಣ್ತುಂಬಿಕೊಳ್ಳಲು ದೇಶದ ಬ್ಯಾಡ್ಮಿಂಟನ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ₹16 ಕೋಟಿಗೆ ರಿಟೇನ್ ಆದ, IPL ಕಪ್ ಗೆದ್ದಿದ್ದ ನಾಯಕ ಮೊದಲ ಪಂದ್ಯದಿಂದಲೇ BAN!